ಬುಧವಾರ, ಮೇ 27, 2009

ಡಾ.ನಾ ಡಿಸೋಜರ ಕುರ್ಚಿ ಕತೆ

ಮಯೂರ-ಮೇ-೨೦೦೯ ರಲ್ಲಿ ಈ ಕತೆ ಪ್ರಕಟವಾಗಿತ್ತು. ಹಾಗೆ ನೋಡಿದರೆ "ನಾಡಿ" ಅನೇಕ ದಿನಗಳಿಂದ ಕತೆ ಬರೆಯಿತ್ತಿದ್ದಾರೆ
ಅನೇಕ ಆಯಾಮಗಳಲ್ಲಿ ಕೈ ಆಡಿಸಿದ್ದಾರೆ.ಯಾರ ಮನಸ್ಸಿಗೂ ನೋವಾಗದ ಹಾಗೆ ಆದರೆ ನೇರವಾಗಿ ಹೇಳುವ ಕಲೆಗಾರಿಕೆ ಇವರಿಗೆ ಸಿದ್ದಿಸಿದೆ. ಇನ್ನು ಪ್ರಸ್ತುತ ಕುರ್ಚಿಯ ಕತೆಗೆ ಬರೋಣ....


"ಕುರ್ಚಿ" ಇದು ನಮ್ಮ ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾದ ಒಂದು ವಿಶಿಷ್ಟ ಅಧಿಕಾರ ಸೂಚಿಸುವ ಪದ. ಹಿಂದೆಲ್ಲ ರಾಜ
ಮಹಾರಾಜರು ಸಿಂಹಾಸನಕ್ಕೆ ಬಡಿದಾಡುತ್ತಿದ್ದರು ಕುರ್ಚಿ ಇದು ಅಧಿಕಾರ ಚಲಾಯಿಸುವವರ ಸೊತ್ತಾಗಿ ಬಿಂಬಿತವಾಗುತ್ತಲೇ ಇದೆ.
ಪ್ರಸ್ತುತ ಕತೆ ಇರುವುದು ಆ ಒಂದು ಸಂಘರ್ಷದ ಸುತ್ತಲೇ....ಕಣಸೇ ಜಟ್ಯಪ್ಪ ಹಾಗೂ ಒಡೆಯರ ನಡುವೆ ತಿಕ್ಕಾಟ ಇದ್ದೇ ಇದೆ
ಒಡೆಯನ ಹೊಲದ ಗೇಣಿದಾರ ಅಂದ ಮಾತ್ರಕ್ಕೆ ನಿಯಮ ಪಾಲಿಸಿಕೊಂಡು ಬರಲೇ ಬೇಕು ಎಂಬ ಧೋರಣೆಗೆ ವಿರುದ್ದವಾಗಿ
ನಡೆಯ ಬಯಸಿದವ.ಒಡೆಯರಿಗೂ ಇವನ ಬಗ್ಗೆ ಮುನಿಸಿದೆ ಉಳಿದವರಂತೆ ಇವನನ್ನು ಮಣಿಸಲಾಗುತ್ತಿಲ್ಲ ಇದು ಅವರಿಗೆ ಅಸಮಾಧಾನ ತರುತ್ತದೆ.ನುಂಗಿಕೊಂಡಿರುತ್ತಾರೆ. ಬೇರೆ ಊರಿಗೆ ವರ್ಗವಾಗಿ ಹೋದ ಮಿರಾಂದ ಮಾಸ್ತರರು ಬಿಟ್ಟು ಹೋದ ಹಳೆ
ಮುರುಕಲು ಕುರ್ಚಿ ಜಟ್ಯಪ್ಪ ರಿಪೇರಿ ಮಾಡಿಸುತ್ತಾನೆ. ಆಚಾರಿ ಹೇಳಿದ ಮಾತಿಗೆ ಸೊಪ್ಪು ಹಾಕದೆ, ಊರವರ ಕೀಟಲೆಗೆ ಹೆದರದೆ ಹೆಂಡತಿಯ ಕಳವಳಗಳಿಗೆ ಸೊಪ್ಪು ಹಾಕದೇ ಆ ಮಡಚುವ ಕುರ್ಚಿ ಮೇಲೆ ಕೂಡುತ್ತಾನೆ. ರಾಮೇಶ್ವರ ಯುವಕ ಸಂಘದವರು ಆಡಲಿರುವ "ಶನಿಮಹಾತ್ಮೆ" ನಾಟಕದ ದಿನ ಊರಿನ ಜನ ಇನ್ನೊಂದು ವಿಚಿತ್ರ ಪ್ರಸಂಗ ನೊಡುತ್ತಾರೆ ನಾಟಕ
ನೋಡಲು ಒಡೆಯರು ಬರುತ್ತಾರೆ ಎಂದು ಸೂಚ್ಯ ವಾಗಿ ಅವರ ಆಳು ಅವರ ಕುರ್ಚಿ ತಂದು ಇರಿಸುತ್ತಾನೆ.. ಸ್ವಲ್ಪ ಹೊತ್ತಿನ ನಂತರ ಒಡೆಯರು ಠೀವಿಯಿಂದ ಅದರಲ್ಲಿ ಕುಳಿತುಕೊಳ್ಳುತ್ತಾರೆ....ಆಗ ಜಟ್ಯಪ್ಪ ಬರುತ್ತಾನೆ ತನ್ನ ಮಡಚುವ ಕುರ್ಚಿ ಜತೆ.
ಒಡೆಯರಿಗೆ ಅನತಿ ದೂರದಲ್ಲಿ ಕುರ್ಚಿ ಹಾಕಿಕೊಂಡು ಕುಳಿತ ಅವನನ್ನು ನೋಡಿ ದಿಗಿಲು ಆದರೆ ಕೆಲವರು ಸಿಳ್ಳೆಹಾಕಿ ,ಕೇಕೆಹೊಡೆದು ತಮ್ಮ ಮೆಚ್ಚಿಗೆ ಸೂಚಿಸುತ್ತಾರೆ.. ಒಡೆಯರು ಪೂರ್ತಿ ನಾಟಕ ನೋಡದೆ ಎದ್ದು ಹೋಗುತ್ತಾರೆ.ಮುಂದೆ ಊರಲ್ಲಿ ಎಲ್ಲೇ ಸಭೆ, ಸಮಾರಂಭ ಆಗಲಿ ಮೇಲಿನ ಸೀನು ಪುನರಾವರ್ತನೆ ಆಗುತ್ತದೆ. ಜಟ್ಯಪ್ಪನದು ಬಹಳ ಸರಳ ತತ್ವ
"ರೈತರು ಹುಲ್ಲು ,ಚಾಪೆ , ಕಂಬಳಿ ಹಾಸಿಕೊಂಡು ಕುಳಿತುಕೊಳ್ಳಬೇಕು ಎಂಬ ನಿಯಮ ಎಲ್ಲಿದೆ? ತಾವೇಕೆಕುರ್ಚಿ ಹಾಕಿಕೊಂಡು
ಕೂರಬಾರದು? ಜಮೀನು ಒಡೆಯರದ್ದು ನಿಜ ಆದರೆ ಈ ಜಮಿನಿನಲ್ಲಿ ಮುಕಳಿ ಮೇಲೆ ಮಾಡಿಕೊಂಡು ಬೆಳೆ ತೆಗೆಯುವವರು
ನಾವಲ್ಲವೆ?"
ಬಹುಷಃ ಈ ದೇಶದ ಎಲ್ಲ ರೈತರ ಒಳದನಿ ಇದೇ ಆಗಿದೆ ಅಲ್ಲವೇ ? ಕತೆಗಾರ ಚೆನ್ನಾಗಿ ಸ್ಕೋರ್ ಮಾಡತಾರೆ.
ಕತೆ ತಿರುವು ತೆಗೆದುಕೊಳ್ಳುತ್ತದೆ ಜಟ್ಯಪ್ಪ ನೆಟ್ಟ ಬಂಡಾಯದ ಬೀಜ ಬೇರೆ ರೀತಿಯಲ್ಲಿ ಟಿಸಿಲೊಡೆಯುತ್ತದೆ. ಬೀರನ ಮಗ
ತೋರಿಸಿದ ಕರಾಮತ್ತು ಎಂತಾದು ಬೀರನ ಜೊತೆ ಒಡೆಯನ ಮನೆಗೆ ಅವನ ಮಗ ಬೀರ ಕೈ ಕಟ್ಟಿ ತಲೆ ತಗ್ಗಿಸಿ ಅಪ್ಪ ವಿಧೇಯನಾಗಿ ನಿಲ್ಲುತ್ತಾನೆ ಆದರೆ ಮಗ ನೋಡಿ ಒಡೆಯರ ಎದಿರು ಖಾಲಿ ಇದ್ದ ಕುರ್ಚಿ ಮೇಲೆ ಕುಳಿತ. ಒಡೆಯರ ಕಣ್ಣಲ್ಲಿ ಬೆಂಕಿ ಆದರೆ ಕೈ ಹಿಸುಕಿಕೊಳ್ಳುತ್ತಾರೆ. ಬೀರನ ಮಗ ಹೇಳೋದು "ಕುರ್ಚಿ ಇರಾದು ಕೂರೋಕೆ ಅಲ್ವಾ". ಜಟ್ಯಪ್ಪ ಬೀರನ
ಮಗನನ್ನು ಕಂಡು ಅಭಿನಂದಿಸುತ್ತಾನೆ.

ಇಡೀ ಕತೆ ಗಮನಿಸಿದರೆ ಶೋಷಿತರ ಪರಇದೆ. ಆದರೆ ಎಲ್ಲೂ ಅಬ್ಬರವಿಲ್ಲ ಜೋರಿಲ್ಲ ಆದರೂ ಈ ಕತೆ ಅಂತಃಕರಣ
ಕಲಕುತ್ತದೆ ಒಂದರೆ ಕ್ಷಣ ನಾವು ಕುಳಿತ ಕುರ್ಚಿ ಗಳ ಹಿಂದೆಯೂ ಯಾರದೋ ನರಳಾಟ ಇದೆ ಅಂತ ಅನಿಸುತ್ತದೆ....

3 ಕಾಮೆಂಟ್‌ಗಳು:

  1. ದೇಸಾಯರ,
    ‘ನಾಡಿ’ಯವರ ನಾಡಿಯನ್ನು ಸರಿಯಾಗಿ ಹಿಡಿದೀರಿ. ಅಬ್ಬರವಿಲ್ಲದ ಯಥಾರ್ಥ ಬರವಣಿಗೆ ಅವರದು.
    ನೀವು ಓದಿದ್ದನ್ನು ನಮ್ಮೆಲ್ಲರ ಜೊತೆಗೆ ಹಂಚಿಕೊಳ್ರಿ. ಖುಶಿ ಆಗ್ತದ.
    ನಿಮ್ಮ ಹೊಸಾ blog ನಮ್ಮೆಲ್ಲರ ಮನಸ್ಸನ್ನ ಬೆಳಗಲಿ ಅಂತ ಹಾರೈಸ್ತೀನಿ.

    ಪ್ರತ್ಯುತ್ತರಅಳಿಸಿ
  2. ಸುನಾಥ ಅವರಿಗೆ ಬೆನ್ನು ಚಪ್ಪರಿಸೀರಿ ಧನ್ಯವಾದಗಳು...!

    ಪ್ರತ್ಯುತ್ತರಅಳಿಸಿ
  3. ದೇಸಾಯಿ ಸರ್,

    ದೇಸಾಯಿಯವರ ಕತೆಯನ್ನು ಚೆನ್ನಾಗಿ ವಿಶ್ಲೇಷಿದ್ದೀರಿ...

    ಪ್ರತ್ಯುತ್ತರಅಳಿಸಿ