ಮಂಗಳವಾರ, ಫೆಬ್ರವರಿ 2, 2010

ವೈದೇಹಿ ಅವರ ಎರಡು ಕತೆಗಳು...

ಬಹುಷಃ ವೈದೇಹಿ ಅವರ ಜನಪ್ರಿಯತೆಗೆ ಲಂಕೇಶ್ ನೀಡಿದ ಕೊಡುಗೆ ಅಪ್ರತಿಮ ಸ್ವತಃ ವೈದೇಹಿ ಅವರು ಇದನ್ನು ಅನೇಕ ಸಂಧರ್ಭಗಳಲ್ಲಿಒಪ್ಪಿಕೊಳ್ತಾರೆ ಕೂಡ.ಬಹಳ ವಿಶಿಷ್ಟ ಶೈಲಿ ವೈದೇಹಿ ಅವರದು ಅವರು ಬೆಳೆದು ಬಂದ ಪರಿಸರ ತಾವು ನೋಡಿದ ತಿಳಿದ ಜೀವಂತ ಪಾತ್ರಗಳು ಅವುಗಳ ಹೆಣಗಾಟಗಳು ಹೀಗೆ ಮಣ್ಣಿನ ವಾಸನೆ ಇವರ ಅನೇಕ
ರಚನೆಗಳಲ್ಲಿ ಹೊಮ್ಮುತ್ತೆ. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಅವರ ಕತೆಗಳ ಬಗ್ಗೆ ಚರ್ಚಿಸಹೊರಟಿರುವ
ನನ್ನ ಸಾಹಸಕ್ಕೆ ನಿಮ್ಮ ಮನ್ನಣೆಯಿರಲಿ.ಪ್ರಸ್ತುತ ಕತೆಗಳನ್ನು ನಾನುಆಯ್ದುಕೊಂಡಿದ್ದು ಅಕ್ಷರ ಪ್ರಕಾಶನದ "ಕೆ ವಿ ಸುಬ್ಬಣ್ಣ ನೆನಪಿನ
ಮೊದಲ ಓದು ಪುಸ್ತಕ ಮಾಲೆ" ಯಿಂದ. ಇದು ಅಪರೂಪದ ಮಾಲೆ ಇಲ್ಲಿ ಪಂಪನಿಂದ ಡಿ ಆರ್ ನಾಗರಾಜ್ ವರೆಗೆ ಸುಬ್ಬಣ್ಣ ಆಯ್ದ
ಕತೆ, ಕವಿತೆ ಹಾಗೂ ವಿಮರ್ಶೆಗಳಿವೆ. ಪ್ರಸ್ತುತ ವೈದೇಹಿ ಸಂಕಲನದಲ್ಲಿ ಏಳು ಕತೆಗಳಿವೆ ಚಿತ್ರವಾಗಿ ಪ್ರಶಸ್ತಿ ಗಳಿಸಿದ "ಗುಲಾಬಿ ಟಾಕೀಸು.." ಸಹ ಇದೆ.ಇರಲಿ ಇದರಲ್ಲಿನ ನನಗೆ ಕಾಡಿದ ಎರಡು ಕತೆಗಳ ಬಗ್ಗೆ ಹೇಳುವೆ..

೧) ಪುಟ್ಟಮ್ಮತ್ತೆ ಹಾಗೂ ಮೊಮ್ಮಗಳು...>
---------------------------
ತಲೆಬರಹ ನೋಡಿದ್ರೆ ಇದು ಜನರೇಶನ್ ಗ್ಯಾಪ್ ಕತೆಅಂತ ಯಾರಾದರೂ ಸುಲಭದಲ್ಲಿ ಊಹಿಸಬಹುದು ಒಂದರ್ಥದಲ್ಲಿ ಅದು ನಿಜ ಕೂಡ. ಎರಡು ತಲೆಮಾರುಗಳ ಕತೆ ಇದು ಕೇಂದ್ರಬಿಂದು ಇಬ್ಬರು ಹೆಂಗಸರು.ಸಂಕ್ಷಿಪ್ತವಾಗಿ ಕತೆ ಬಗ್ಗೆ ಹೇಳುವೆ. ಪುಟ್ಟಮ್ಮತ್ತೆ ಬಹಳ ನೋವು ಅನುಭವಿಸಿದವಳು ಅವಳು ಕಂಡ ಗಂಡಸರು ಅವಳ ಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದಾರೆ
ಅದು ಅವಳ ಅಮ್ಮನನ್ನು ಅನಮತ್ತಾಗಿ ಬಾವಿಗೆ ತಳ್ಳಿದ ಅಪ್ಪ ಅಥವಾ ಸಾಕಿದ ನೆರೆಮನೆಯ ಅಜ್ಜಿಯ ವೈಕುಂಠದಂದು ಪುಟ್ಟಮ್ಮತ್ತೆ ಮಲಗಿದ ಹೊದಿಕೆಯೊಳಗೆತೂರಿ ಅವಳಿಂದ ಪಿನ್ನಿನಿಂದ ಚುಚ್ಚಿಸಿಕೊಂಡು ಓಡಿದವ ಅಥವಾ ಗಂಡನಾಗಿ ಬಂದ
ದೋಸೆ ಹುಯ್ಯೋ ವಾಸುಭಟ್ಟ ಆಗಿರಬಹುದು ತಮ್ಮ ಪಾತ್ರ ಆಡಿದ್ದಾರೆ. ವಾಸುಭಟ್ಟ ಸತ್ತ ಸುದ್ದಿ ಅದೇ ಹುಟ್ಟಿದ ಮಗಳನ್ನು ಎತ್ತಿಕೂತ ಪುಟ್ಟಮ್ಮತ್ತೆಗೆ ಬರುತ್ತದೆ.ನೆರೆಮನೆ ರಂಗಪ್ಪಯ್ಯ ಆಸರೆಯಾಗುತ್ತಾನೆ ಅವನೇ ಮಗಳಿಗೆ ಮದ್ವೆ ಮಾಡಿಸುತ್ತಾನೆ ಮಗಳನ್ನು ಹೆತ್ತ ಮಗಳು ಹೆಣವಾಗಿ ಮಲಗಿದಾಗ ಹೌಹಾರುತ್ತಾಳೆ.ಮೊಮ್ಮಗಳು ಕಮಲಾವತಿ ಅಜ್ಜಿಯ ಸ್ವಭಾವಕ್ಕೆ ತದ್ವಿರುದ್ಧ
ತನ್ನ ಸುತ್ತ ನಡೆಯುವ ಅನ್ಯಾಯಗಳಿಗೆ ಪ್ರತಿಭಟಿಸುವವಳು.ತನ್ನ ಅಜ್ಜಿಯ ಉಪದೇಶಕ್ಕೆ ಅಸಡ್ಡೆ ತೋರುವವಳು ಪಂಕ್ತಿಯಲ್ಲಿ
ಬಡಿಸುವಾಗ ಯಾರೋ ಕಣ್ಣುಹೊಡೆದಾಗ ಅವನ ತಲೆಮೇಲೆ ಬಿಸಿ ಸಾರು ಹುಯ್ದ ದಿಟ್ಟೆ..ತನ್ನ ಅಜ್ಜಿ ಕರ್ಮ ಎಂದು ಬೇರೆಯವರ
ಮನೆ ಚಾಕರಿಮಾಡೋದು ಅವಳಿಗೆ ಸರಿಬರಲಿಲ್ಲ. ಇವಳನ್ನೂ ಯಾರೋ ಕೆಲಸಕ್ಕೆ ಕರೆದಾಗ " ಯಂತ ಅಜ್ಜಿ ನೀ ಹೇಳುದು!
ನಾ ಹುಟ್ಟಿದ್ದ್ ಆ ಪರಮೇಸನ ಹೆಂಡ್ತಿ ಕಚ್ಚೆ ತಿಕ್ಕುಕಾ..." ಅಂತ ಪ್ರತಿಭಟಿಸಿದವಳು.ನೋಡಲು ಬಂದ ಒಂದೆರಡು ಸಂಭಂಧಗಳು
ಊರಲ್ಲಿ ಹುಟ್ಟಿದ ಇವಳ ಬಗೆಗಿನ ಪುಕಾರುಗಳಿಗೆ ಹೆದರಿ ಹಿಂತೆಗೆದಾಗ ರೆಡಿಮೇಡ್ ಅಂಗಿ ಹೊಲಿಯೋ ಕಾರಖಾನೆಗೆ ಕೆಲಸಕ್ಕೆ
ಸೇರಿಕೊಳ್ಳುತ್ತಾಳೆ.ನಾಲ್ಕು ಐದು ವರ್ಷ ಕಳೆದರೂ ಜೀವನದ ಗತಿಯಲ್ಲಿ ಯಾವ ಬದಲಾವಣೆಯೂ ಇಲ್ಲ.

ವೈದೇಹಿ ಎರಡು ತಲೆಮಾರಿನ ಚಿತ್ರಣ ನೀಡತಾರೆ.ಹೆಣ್ಣು ಅವಳ ಬವಣೆ ಬಗ್ಗೆ ಇಲ್ಲಿ ಗೋಳಾಟವಿಲ್ಲ ಹಾರಾಟ
ಚೀರಾಟಗಳಿಲ್ಲ. ಬದಲು ಪುಟ್ಟಮ್ಮತ್ತೆಯ ಬದುಕು ಬಿಚ್ಚಿಡುತ್ತಲೇ ಅನೇಕ ಪ್ರಶ್ನೆ ಕೇಳ್ತಾರೆ.ಬಂದಿದ್ದೆಲ್ಲ ಬರಲಿ ಎಂದು ಗಟ್ಟಿಯಾದ
ಪುಟ್ಟಮ್ಮತ್ತೆಯ ತದ್ವಿರುದ್ಧವಾದ ಮೊಮ್ಮಗಳು.ಅನ್ಯಾಯವನ್ನು ಹೊಸಕಿ ಹಾಕುವವಳು ನೂರೆಂಟು ಪ್ರಶ್ನೆಗಳು ಅವಳಿಗೆ ಅವುಗಳಿಗೆ
ತನ್ನದೇ ರೀತಿಯಲ್ಲಿ ಸಮಧಾನ ಕಂಡುಕೊಂಡವಳು.ಇಲ್ಲಿ ಈ ನಿಲುವು ಸರಿ ಎಂದು ಲೇಖಕಿ ಪ್ರತಿಪಾದಿಸುತ್ತಿಲ್ಲ ಬದಲು ಒಂದು
ತಲೆಮಾರು ಬದಲಾದರೂ ಹೆಣ್ಣು ಪಡುವ ಬವಣೆಗೆ ಅಂತ್ಯಇಲ್ಲ ಎಂದು ಹೇಳುತ್ತಾರೆ.

೨) ಅಮ್ಮಚ್ಚಿಯೆಂಬ ನೆನಪು...
----------------------
ಪ್ರಸ್ತುತ ಕತೆ ಕಥಾನಾಯಕಿ ಹಾಗೂ ಅವಳ ಬಾಲ್ಯದ ಒಡನಾಡಿ ಅಮ್ಮಚ್ಚಿಯ ಜೊತೆ ಕಳೆದ ದಿನಗಳ ಕುರಿತದ್ದು .ಅಮ್ಮಚ್ಚಿ
ಹಾಗೂ ಓರಿಗೆಯವರಲ್ಲ ಆದರೆ ನಾಯಕಿಯ ನೆನಪಲ್ಲಿ ಅಮ್ಮಚ್ಚಿ ತುಂಬಿಕೊಂಡಿದ್ದಾಳೆ. ಅಮ್ಮಚ್ಚಿಗೆ ಅಪ್ಪ ನಿಲ್ಲ ಸೀತತ್ತೆ ಅವಳ
ತಾಯಿ ಗಂಡು ದಿಕ್ಕಿಲ್ಲದೆ ಮನೆಗೆ ವೆಂಕಪ್ಪ ಬರುತ್ತಾನೆ ನೋಡುತ್ತಿದ್ದಂತೆ ವೆಂಕಪ್ಪಯ್ಯ ಅನಿಸಿಕೊಳ್ಳುತ್ತಾನೆ. ಸೀತತ್ತೆಗೆ ಅವನ
ಉಪಸ್ಥಿತಿ ಸಂತಸ ತಂದಿರುತ್ತದೆ ಆಸರೆಗಾಗಿ ಬಂದವ ಎಂದು ನಂಬಿರುತ್ತಾಳೆ ಆದರೆ ಅಮ್ಮಚ್ಚಿಯದು ಮಾತ್ರ ತದ್ವಿರುದ್ಧ ನಿಲುವು
ಉಪಟಳ ಕೊಡಲೇ ಬಂದವ ಇದು ಅವಳ ನಿಲುವು. ಒಂಥರಾ ಎಣ್ಣೆ ಸೀಗೆ ಸಂಭಂಧ ಇಬ್ಬರದೂ. ಅಮ್ಮಚ್ಚಿಗೆ ತನ್ನ ವಿಷಯಗಳಲ್ಲಿ
ಮೂಗು ತೂರಿಸುವುದು ಸರಿ ಬರೋದಿಲ್ಲ. ಇವಳು ವಾರೆ ಬೈತಲೆ ತೆಗೆದರೆ, ಪೇಟೆಗೆ ತಿರುಗಾಡಲು ಹೋದರೆ,,ಸಿನೇಮಾಗೆ ಹೋದರೆ ಹೀಗೆ ಇವಳ ಪ್ರತಿ ನಡೆಯಲ್ಲೂ ಅವನಿಗೆ ತಪ್ಪು ಕಾಣುತ್ತದೆ. ಆದರೆ ಹಾಗಂತ ಅಮ್ಮಚ್ಚಿ ಅವನಿಗೆ ಸೊಪ್ಪು ಹಾಕುವಳಲ್ಲ.
ಇವರಿಬ್ಬರ ನಡುವೆ ಸೀತತ್ತೆ ಒದ್ದಾಡುತ್ತಿರುತ್ತಾಳೆ ನಾಯಕಿ ಮೂಕ ಪ್ರೇಕ್ಷಕಿ. ರಮ ಟೀಚರ್ ಕಡೆ ರವಿಕೆ ಹೊಲಿಸಲು ಹೋದಾಗ
ಅವರ ಕಡೆ ಮೂದಲಿಕೆಯ ಮಾತು ಅಮ್ಮಚ್ಚಿ ಕೇಳಬೇಕಾಗುತ್ತದೆ ಮಾತ್ರವಲ್ಲ ರಮಾ ಟೀಚರ್ ಇವಳು ಹೇಳಿದ ಪ್ರಕಾರ ಹೊಲಿಯದೆ ವೆಂಕಪ್ಪಯ್ಯ ಹೇಳಿದ ರೀತಿಯಲ್ಲಿ ಹೊಲಿದಾಗ ಅಮ್ಮಚ್ಚಿ ಕೋಪಕ್ಕೆ ತಾರವೇ ಇಲ್ಲ. ಅದೇ ಸಿಟ್ಟಿನಲ್ಲಿ ವೆಂಕಪ್ಪಯ್ಯ
ತಿರುಪತಿಗೆ ಹೋದಾಗ ಅವನ ಅಂಗಿ ವಿರೂಪಗೊಳಿಸುತ್ತಾಳೆ ಊರಿಂದ ಬಂದ ವೆಂಕಪ್ಪಯ್ಯ ಅಮ್ಮಚ್ಚಿ ಮೇಲೆ ಏರಿ ಹೋಗುತ್ತಾನೆ
ದರದರ ಎಳೆದವ ರೂಮಿಗೆ ಒಯ್ಯುತ್ತಾನೆ ಸೀತತ್ತೆಯ ಕೂಗಾಟಕ್ಕೂ ಬೆಲೆ ಇಲ್ಲದೆ, ನಾಯಕಿಗೆ ನೋಡಿದ ಸಂಗತಿ ಯಾರಿಗೂ
ಹೇಳಬಾರದೆಂದು ತಾಕೀತು ಮಾಡಲಾಗುತ್ತದೆ. ಮುಂದೆ ವೆಂಕಪ್ಪಯ್ಯ ಅಮ್ಮಚ್ಚಿಯನ್ನು ಮದುವೆಯಾಗುತ್ತಾನೆ. ಮುಂದೆ ಎಂದೋ ಒಂದಿನ ನಾಯಕಿಗೆ ಮತ್ತೆ ಅಮ್ಮಚ್ಚಿಯ ದರ್ಶನ ವಾಗುತ್ತದೆ. ಸೀತತ್ತೆ ಕೇಳಿದಾಗ ವೆಂಕಪ್ಪಯ್ಯ ನೇಣ್ ಹಾಕ್ಕೊಂಡು ಸತ್ತ ಸುದ್ದಿ ನಿರ್ವಿಕಾರವಾಗಿ ಹೇಳುತ್ತಾಳೆ.

ವೈದೇಹಿ ಅವರ ಮೇಲಿನ ಕತೆ ಓದುತ್ತಿದ್ದಂತೆ ನನಗೆ ನೆನಪಾದದ್ದು ಆಲನಹಳ್ಳಿ ಅವರ ಕಾಡು ಕಾದಂಬರಿ ಅಲ್ಲಿಯ ಕಿಟ್ಟಿ ಹಾಗೂ ಇಲ್ಲಿಯ ನಾಯಕಿ ಇಬ್ಬರೂ ತಮ್ಮ ಬಾಲ್ಯದಲ್ಲಿ ಎದುರಾದ ವ್ಯಕ್ತಿಗಳ ಬಗ್ಗೆ ಹೇಳುತ್ತಲೇ ಅವರು ಅನುಭವಿಸಿದ
ಕ್ರೌರ್ಯ , ಕ್ಷುದ್ರತೆ ಎಲ್ಲ ಅನಾವರಣಗೊಳಿಸುತ್ತಾರೆ.ಇದು ಬರೀ ವರದಿ ಮೀರಿ ನಿಲ್ಲುವಂತದ್ದು. ಮೇಲಿನ ಎರಡೂ ಕತೆಗಳಲ್ಲಿ ಬಳಸಿದ ಭಾಷೆ ವಿಶಿಷ್ಟವಾಗಿದೆ. ಘಟ್ಟದ ಕೆಳಗಿನ ಭಾಷೆ ಕನ್ನಡದ ಮಟ್ಟಿಗೆ ಅಪರೂಪ. ಕತೆಗಾರ ತಾ ನಿರ್ಮಿಸಿದ ಪಾತ್ರಗಳಲ್ಲಿ
ಜೀವ ತುಂಬಬೇಕಾದರೆ ಅವರಾಡುವ ಭಾಷೆಯೂ ವಿಶಿಷ್ಟವಾಗಿಸಬೇಕು. ವೈದೇಹಿ ಆ ನಿಟ್ಟಿನಲ್ಲಿ ಗೆದ್ದಿದ್ದಾರೆ. ಇನ್ನೂ ಹಲವು ಗಮನ
ಸೆಳೆಯೂ ಕತೆಗಳು ಈ ಸಂಕಲನದಲ್ಲಿವೆ....

ಭಾನುವಾರ, ಡಿಸೆಂಬರ್ 6, 2009

ಅಲ್ಬರ್ಟೊ ಮೊರಾವಿಯಾ...conjugal love

ಅಲ್ಬರ್ಟೊಮೊರಾವಿಯಾ ಇಟಲಿ ದೇಶದ ಪ್ರಸಿದ್ಧ ಹಾಗೂ ಅಷ್ಟೇ ವಿವಾದಾತ್ಮಕಲೇಖಕ.ಇಪ್ಪತ್ತನೇ ಶತಮಾನದ ಪ್ರಮುಖ ಇಟಾಲಿಯನ್ ಲೇಖಕರಲ್ಲಿ ಅವ ಒಬ್ಬ. ಅವನ ಕತೆ,ಕಾದಂಬರಿಗಳು ಈ ವಿವಾಹ,ಪ್ರೇಮ ಹಾಗೂ ಅದರಲ್ಲಡಗಿದ
ಹಿಪಾಕ್ರಸಿಗಳ ಸುತ್ತ ಕೇಂದ್ರಿಕೃತವಾಗಿದ್ದವು. ಹೇಗೆ ಮನುಷ್ಯ ಅರ್ಥವಿಲ್ಲದ ನಂಬಿಕೆಗಳ ಜೊತೆ ರಾಜಿಮಾಡಿಕೊಂಡು ಜೀವಿಸುತ್ತಿದ್ದಾನೆ ಇದರ ಚಿತ್ರಣ ಅವ ಸೃಷ್ಟಿಸಿದ ಪಾತ್ರಗಳಲ್ಲಿ ಕಾಣಬಹುದು. ಅವನ ಕೆಲವು ಕಾದಂಬರಿಗಳು ಸಿನೆಮ ಸಹ
ಆಗಿವೆ.೧೯೫೭ ರ ಸೋಫಿಯಾ ಲಾರೆನ್ ಳ two women ಮುಂತಾದವು. ತನ್ನ ನಿಲುವುಗಳನ್ನು ನಿರ್ಭಿಡೆಯಿಂದ ಪ್ರಸ್ತುತ ಪಡಿಸುತ್ತಿದ್ದ ಮೊರಾವಿಯಾ ವಿವಾದಾತ್ಮಕ ಲೇಖಕ ಎಂದು ಕೂಡ ಹೆಸರು ಗಳಿಸಿದ್ದ.

ಪ್ರಸ್ತುತ conjugal love ಕೂಡ ವಿವಾಹ ವ್ಯವಸ್ಥೆಬಗ್ಗೆ ಕೇಂದ್ರಿತವಾಗಿದೆ.ಸ್ವಲ್ಪದರಲ್ಲಿ ಕತೆ ಬಗ್ಗೆ
ಹೇಳುವೆ.ಕಥಾನಾಯಕ ಸಿಲ್ವಿಯೋ ಅವನಿಗೆ ಚೆಂದದ ಹೆಂಡತಿ ಲಿಡಾ. ಲಿಡಾ ಮೇಲೆ ಸಿಲ್ವಿಯೋನಿಗೆ ವಿಪರೀತ ಪ್ರೀತಿ,
ಮೋಹ. ಆ ಮೋಹ ಅವನೊಳಗೆ ಅವಿರತವೂ ಜ್ವಾಲೆಯಾಗಿ ಉರಿಯುತ್ತಿರುತ್ತದೆ.ಅವಳ ಮುಂದೆ ಜಗತ್ತು ಶೂನ್ಯ ಇದು
ಅವನ ಭಾವನೆ. ಅವನೊಳಗೆ ಇನ್ನೊಂದು ಹಂಬಲ ಇರುತ್ತದೆ. ತಾನೊಬ್ಬ ಲೇಖಕ ಆಗಬೇಕು ಸಣ್ಣಪುಟ್ಟದಾಗಿ ಬರೀತಿರ್ತಾನೆ
ಆದರೆ ಅವುಗಳಿಂದ ಅವನಿಗೆ ತೃಪ್ತಿ ಸಿಕ್ಕಿರುವುದಿಲ್ಲ ತನ್ನಿಂದ ಒಂದು ಮಹೋನ್ನತ ಕೃತಿ ಹೊರಬರಬೇಕು ಇದು ಅವನ ತುಡಿತ.
ಆದರೆ ಲಿಡಾಳ ಮೇಲಿನ ಅತಿಪ್ರೀತಿ ಅವನ ಸಾಮರ್ಥ್ಯ ಕುಗ್ಗಿಸಿದೆ ಇದು ಅವನು ನಂಬಿದ ಸತ್ಯ. ಒಂದು ನಿರ್ಧಾರಕ್ಕೆ ಬರುತ್ತಾನೆ ತನ್ನ ಕೃತಿ ಮುಗಿಯುವವರೆಗೂ ಲಿಡಾಳಿಂದ ದೈಹಿಕವಾಗಿ ದೂರ ಇರೋದು. ತನ್ನ ನಿರ್ಣಯ ಹೆಂಡತಿಗೂ ತಿಳಿಸುತ್ತಾನೆ. ಗಂಡನ ಈ ನಿಲುವು ವಿಚಿತ್ರ ಅನಿಸುತ್ತದೆ ಲಿಡಾಳಿಗೆ ಆದರೆ ಗಂಡನ ಮಹತ್ವಾಕಾಂಕ್ಷೆ ಈಡೇರಿಸಲು ಅವಳು
ಸಮ್ಮತಿಸುತ್ತಾಳೆ. ಊರ ಹೊರಗಿನ ಒಂದು ಪ್ರಶಾಂತವಾದ ವಿಲ್ಲಾಕ್ಕೆ ಅವರಿಬ್ಬರೂ ಹೋಗುತ್ತಾರೆ.ಸಿಲ್ವಿಯೋನ ಚರ್ಮ ಅತಿ
ಸೂಕ್ಷ್ಮದ್ದು. ಸ್ವತಃ ಅವನೆಂದೂ ಶೇವ್ ಮಾಡಿಕೊಳ್ಳುತ್ತಿರಲಿಲ್ಲ. ಊರಲ್ಲಿದ್ದಾಗ ಸಲೂನಿಗೆ ಹೋಗುತ್ತಿದ್ದ ಈಗ ವಿಲ್ಲಾದಲ್ಲಿ ಸಮಸ್ಯೆ ಯಾಗಿತ್ತು.ಸಮಸ್ಯೆಗೆ ಪರಿಹಾರ ಎಂಬಂತೆ ಪಕ್ಕದ ಹಳ್ಳಿಯ ಕ್ಷೌರಿಕ ಅಂತೊನಿಯೋ ಸಿಗುತ್ತಾನೆ. ದಿನಾ ಬಂದು ಸಿಲ್ವಿಯೋನ ಸೇವೆ ಮಾಡುತ್ತಾನೆ.ಇತ್ತ ಸಿಲ್ವಿಯೋನ ಬರವಣಿಗೆ ಹೊಸ ಹುರುಪು ,ಗತಿ ಪಡೆದುಕೊಂಡಿರುತ್ತದೆ. ತನ್ನ ರಚನೆಯ ಮೇಲೆ ವಿಶ್ವಾಸ ಅವನಿಗೆ ಇಮ್ಮಡಿಯಾಗಿರುತ್ತದೆ. ಲಿಡಾ ಸಹ ಹೊಂದಿಕೊಂಡಿರುತ್ತಾಳೆ.ಒಂದಿನ ಲಿಡಾ ಗಂಡನಿಗೆ
ಮೊರೆ ಇಡುತ್ತಾಳೆ ಅಂತೋನಿಯೋ ನನ್ನು ಬಿಡಿಸಲು .ಹೆಂಡತಿಯ ಈ ವಿಚಿತ್ರ ಬೇಡಿಕೆ ಸಿಲ್ವಿಯೋಗೆ ಗಲಿಬಿಲಿ ಮಾಡುತ್ತದೆ.
ತನ್ನ ಸೂಕ್ಷ್ಮ ಚರ್ಮ,ತಪ್ಪದೆ ಬರುವ ಅವನಿಂದ ಎಷ್ಟು ಉಪಕಾರ ಆಗಿದೆ ಇದನ್ನು ಲಿಡಾಗೆ ತಿಳಿಸುತ್ತಾನೆ. ತಾನು ಮಾಡುತ್ತಿರುವ ಕೆಲಸ ಮುಗಿಯಲು ಬಂದಿದೆ ತೃಪ್ತಿ ತಂದಿದೆ ಇದು ಸಿಲ್ವಿಯೋನಿಗೆ ಸಮಾಧಾನದ ವಿಷಯ.
ಒಂದು ಬೆಳದಿಂಗಳ ರಾತ್ರಿ ಫಕ್ಕನೆ ಎಚ್ಚರವಾದ ಸಿಲ್ವಿಯೋಗೆ ಲಿಡಾ ಮನೆಯಲ್ಲಿ ಇಲ್ಲದಿರುವುದು ಗೊತ್ತಾಗುತ್ತದೆ. ವಿಲ್ಲಾದ ಹೊರಗೆ ಬಿದ್ದಾಗ ಮುಂದೆ ಸ್ವಲ್ಪ ದೂರದಲ್ಲಿ ಲಿಡಾ ಕಾಡಲ್ಲಿ ನಡೆದುಹೋಗುತ್ತಿರುವುದು ಕಾಣುತ್ತದೆ.
ಗುಡ್ಡ ಸಲೀಸಾಗಿ ಏರಿ ತಾವು ಅವಾಗಾವಾಗ ಹೋಗಿ ಕೂಡುತ್ತಿದ್ದ ಎತ್ತರದ ಕಟ್ಟೆಯತ್ತ ಅವಳು ಹೊರಟಿದ್ದಾಳೆ ಇದು ಸಿಲ್ವಿಯೊನ
ಅರಿವಿಗೆ ಬರುತ್ತದೆ. ಹಿಂಬಾಲಿಸುತ್ತಾನೆ.ಹಾಲು ಚೆಲ್ಲಿದ ಬೆಳದಿಂಗಳು ಅನತಿ ದೂರದಲ್ಲಿ ಲಿಡಾ ನೋಡುತ್ತಿದ್ದಂತೆ ಅಂತೊನಿಯೋ ಅಲ್ಲಿ ಪ್ರತ್ಯಕ್ಷ ಆಗುತ್ತಾನೆ. ಒಬ್ಬರನ್ನೊಬ್ಬರನ್ನು ತಬ್ಬಿಕೊಂಡ ಅವರು ಕತ್ತಲೆಯಲ್ಲಿ ಕರಗುತ್ತಾರೆ.ಮನೆಗೆ ವಾಪಸ್ಸಾದ ಸಿಲ್ವಿಯೋನಲ್ಲಿ
ಅನೇಕ ದ್ವಂದ್ವಗಳು. ಯಾವುದು ಸರಿ ಯಾವುದು ತಪ್ಪು ಈ ಗೊಂದಲದಲ್ಲಿ ಮುಳುಗುತ್ತಾನೆ.ತನ್ನೆಲ್ಲ ಹಂಬಲಗಳು, ಹವಣಿಕೆಗಳು ಕರಗಿಹೋಗಿದ್ದಕ್ಕೆ ಪರಿತಪಿಸುತ್ತಾನೆ. ಲಿಡಾಳನ್ನು ದೋಷಿ ಎಂದು ನಿರ್ಧರಿಸಿದವ ಅವಳ ಈಗಿನ ಸ್ಥಿತಿಗೆ ತನ್ನ ಪಲುದಾರಿಕೆಯೂ ಇದೆ ಈ ಸತ್ಯ ಅವನನ್ನು ಬಾಧಿಸಿತು. ತಾನು ಅಷ್ಟು ಪ್ರೀತಿಯಿಂದ ಆಸ್ಥೆಯಿಂದ ಬರೆದ ಕೃತಿ ನಿಜಕ್ಕೂ ಒಂದು ಸಾಧಾರಣ ರಚನೆಯಾಗಿ ತೋರಿತು. ತನ್ನ ಈ ಹೊಸ ಅನುಭೂತಿಬಗ್ಗೆ ಮರುದಿನ ಲಿಡಾ ಜತೆ ಚರ್ಚಿಸುತ್ತಾನೆ.ಓರ್ವ ವ್ಯಕ್ತಿಯನ್ನು ಪ್ರೀತಿಸುವುದೆಂದಎ ಅವನ/ಅವಳ ಸೌಂದರ್ಯ, ಗುಣ, ರೂಪ ಮಾತ್ರವಲ್ಲ ಅವರ ದೌರ್ಬಲ್ಯವನ್ನೂ ಪ್ರೀತಿಸಿದರೆ ಮಾತ್ರ ಅದು ಪರಿಪೂರ್ಣ ಪ್ರೀತಿ ಅನಿಸಿಕೊಳ್ಳುತ್ತದೆ.ಇದು ಸಿಲ್ವಿಯೋ ಕಂಡುಕೊಂಡ ಹಾಗೂ ಪಾಲಿಸಿದ ಜೀವನ ಸತ್ಯ.

ಮೊರಾವಿಯಾನ ಕೃತಿ ಅನೇಕ ಪ್ರಶ್ನೆ ಹುಟ್ಟುಕಾಕುತ್ತದೆ.ಮೊರಾವಿಯಾ ಮೂಗು ತೂರಿಸಿ ಇದು ನೈತಿಕ ಇದು ಅನೈತಿಕ ಎಂದು ನಿರ್ಣಯ ಹೇಳೋದಿಲ್ಲ. ಪಾತ್ರಗಳು ತಮ್ಮಲ್ಲೆ ಪರಾಮರ್ಶಿಸಿಕೊಳ್ಳುತ್ತ ಪ್ರಶ್ನ್ಸಿಕೊಳ್ಳುತ್ತ
ಉತ್ತರ ಹುಡುಕಲು ಹೆಣಗುತ್ತವೆ. ಅವುಗಳ ಹೆಣಗಾಟದಲ್ಲಿ ಒದುಗನೂ ಭಾಗಿಯಗುತ್ತಾನೆ . ಹೊಸ ಅರ್ಥಗಳತ್ತ ಮುಖಮಾಡುತ್ತಾನೆ. ೧೯೪೯ ರ ಈ ಕೃತಿಯ ವಿಷಯ ಇಂದಿಗೂ ಪ್ರಸ್ತುತ ಅನಿಸುತ್ತದೆ. ಸುಮಾರು ೮೨-೮೩ ರಲ್ಲಿ ಓದಿದ್ದೆ ಈ
ಪುಸ್ತಕ ಮತ್ತೆ ಓದಿದೆ ಹೊಸ ಅರ್ಥ ಹುಡುಕಲು.

ಬುಧವಾರ, ಆಗಸ್ಟ್ 19, 2009

ಸುಮಂಗಲಾ ಕತೆಗಳು

" ಕಾಲಿಟ್ಟಲ್ಲಿ ಕಾಲುದಾರಿ" ಇದು ನಾ ಇತ್ತೀಚೆಗೆ ಓದಿದ ಪುಸ್ತಕ. ಲೇಖಕಿ ಶ್ರೀಮತಿ ಸುಮಂಗಲಾ ಅವರು. ಛಂದ ಪುಸ್ತಕದವರು
ಇದನ್ನು ಹೊರತಂದಿದ್ದಾರೆ. ಇದರ ಬಿಡುಗಡೆಗೂ ನಾ ಹೋಗಿದ್ದೆ.. ಮೊದಲಬಾರಿ ಈ ಲೇಖಕಿ ಬರೆದ ಕತೆ ಓದಿದೆ
ತೀರ ಆತ್ಮೀಯ ಶೈಲಿ ಮಾನವ ಸಂಬಂಧಗಳ ಸೂಕ್ಷ್ಮ ಪ್ರತಿಪಾದನೆ ಈ ಎಲ್ಲ ಕತೆಗಳಲ್ಲೂ ಇದೆ... ಆಧುನಿಕ ಜೀವನ
ಶೈಲಿಗೆ ಸಿಲುಕಿ ಜಡವಾಗಿಹ ಪಾತ್ರಗಳಲ್ಲಿ ಸಂವೇದನೆ ಜೀವಂತವಾಗಿಡಲು ಲೇಖಕಿ ಹೆಣಗುತ್ತಿದ್ದಾರೆ ಅದರಲ್ಲಿ ಸಾಕಷ್ಟು
ಯಶಸ್ವಿಯೂ ಆಗಿದ್ದಾರೆ. ಪಾತ್ರ ಪೋಷಣೆ ವಿಷಯದಲ್ಲಿ ಲೇಖಕಿ ಗೆದ್ದಿದ್ದಾರೆ.

ಪ್ರಸ್ತುತ ಸಂಕಲನದಲ್ಲಿ ೧೩ ಕತೆಗಳಿವೆ ನನಗೆ ತೀರ ಸೇರಿದ ೫ ಕತೆಗಳ ಬಗ್ಗೆ ಇಲ್ಲಿ ಬರೆಯುತ್ತಿರುವೆ...
೧) ಮುತ್ತಿನ ಬುಗುಡಿ :
--------------- ನಾಯಕ ಮಧು ನಾಯಕಿ ವಿನುತ ವಯಸ್ಸಾದ ತಾಯಿ ಅವರ ಕ್ಯಾನ್ಸರ್ ಆರೈಕೆಗೆ ಕರೆದುಕೊಂಡು
ಬರುತ್ತಾರೆ. ಮಧು ವಿನುತಾನ ಕಲೀಗ್ಸ ಎಲ್ಲ ತಾಯಿಯನ್ನು ನೋಡಲು ಬರುತ್ತಿರುತ್ತಾರೆ. ಹಾಗೆಯೇ ಬಂದವರಲ್ಲಿ ಶಿವಾನಿಯೂ
ಒಬ್ಬಳು . ಹಾಕ್ಕೋ ಅಂತ ತಾಯಿ ಅವಳಿಗೆ ಮುತ್ತಿನಬುಗುಡಿ ನೀಡುತ್ತಾರೆ.ಅದು ಅವಳಿಗೆ ಚೆನ್ನಾಗಿ ಕಾಣಿಸಿದ್ದರಿಂದ ಅದನ್ನು ವಿನುತಾಗೆ ಇಟ್ಟುಕೊಳ್ಳಲು ಹೇಳುತ್ತಾರೆ. ಮಧುಗೆ ಹೀಗೆ ತನ್ನ ತಾಯಿ ಅಪರಿಚಿತಳಿಗೆ ಹೀಗೆ ಮುತ್ತಿನ ಬುಗುಡಿಕೊಟ್ಟಿದ್ದು ಸರಿ
ಬರುವುದಿಲ್ಲ... ಚಿಕಿತ್ಸೆ ಫಲಿಸದೆ ತಾಯಿ ತೀರಿ ಕೊಳ್ಳುತ್ತಾರೆ. ಆ ಬುಗುಡಿ ವಾಪಸ್ ಕೇಳಲು ನಿರ್ಧಾರ ಮಾಡುತ್ತಾನೆ ಅವಳ
ಮನೆ ಹತ್ತಿರ ಹೋಗಿ ಫೋನಾಯಿಸುತ್ತಾನೆ..ಶಿವಾನಿ ಹಾಹಿಕೊಂಡ ಬುಗುಡಿ ಫೋನ್ ರಿಸೀವರ್ ಗೆ ತಾಕುತಿರುತ್ತದೆ. ಅದು ಗಲ್ ಗಲ್ ಎಂದು ನಾದ ಹೊರಡಿಸುತ್ತಿರುತ್ತದೆ. ಅದರಲ್ಲಿ ತನ್ನ ತಾಯಿಯ ಎದೆಬಡಿತ ಅನುಭವಿಸುತ್ತ ಆ ಫೋನ್ ಗೆ ಮುತ್ತು ನೀಡುತ್ತಾನೆ.

ಸೂಕ್ಷ್ಮ ಮಾನವೀಯ ಸಂಬಂಧಗಳ ಸೆಳೆತ ಲೇಖಕಿ ಚಿತ್ರಿಸಿದ ಕತೆಯ ಜೀವಾಳ.. ಆ ಮುತ್ತಿನಬುಗುಡಿ ಶಿವಾನಿಗೂ ಮಧುನ
ತಾಯಿಗೂ ಒಂದು ಅಪರೂಪದ ನೆಂಟು ಬೆಸೆಯುತ್ತದೆ.

೨) ಒಂಟಿ ಗೆಜ್ಜೆ :
----------- ಮಿನು ಹಾಗೂ ಅವಳ ತಾಯಿಯ ನಡುವೆ ತಾಕಲಾಟ ವಿದೆ ತಾಯಿ ನಾಟ್ಯದ ಬೆನ್ನುಹತ್ತಿ ಮಮತೆ ಕೊಡಲಿಲ್ಲ ಇದು ಮಿನುನ ದೂರು. ಅಮ್ಮನ ಮೇಲಿನ ದ್ಚೇಷದಿಂದ ತಂದೆ ಸಹ ವಾತ್ಸಲ್ಯ ಹಂಚಲು ವಿಫಲ. ತಾಯಿ ಮಗಳು
ಬಹಳ ದಿನಗಳ ನಂತರ ಸಂಧಿಸುತ್ತಾರೆ. ದೋಷಾರೋಪಣೆ ಜತೆಗೆ ಅತೀತದಲ್ಲಿ ಇಣುಕುತ್ತಾರೆ. ಮಿನುನ ವೈಯುಕ್ತಿಕ ಜೀವನವೂ ಗೊಂದಲ ಇಬ್ಬರುಗೆಳೆಯರು .ತಾಯಿ ಉಂಗುರ ನಾಯಿ ನುಂಗಿದೆ ಎಂದಾಗ ಮಿನು ವ್ಯ್ಗಗ್ರ ಳಾಗಿ ಬಿಚ್ ಎಂದು ತಾಯಿಗೆ ಬೈಯ್ಯುತ್ತಾಳೆ. ತಾಯಿ ಪ್ರತಿಭಟಿಸಿ ತನ್ನ ಅಳಲು ತೋಡಿಕೊಳ್ಳುತ್ತಾಳೆ.ಸಂಹೆ ಆಫೀಸು ಮುಗಿಸಿ ಮನೆಗೆ ಬರುವಾಗ
ಮಿನು ಸುಂದರ ಹುಡುಗಿ ಕುರುಡನ ಕೈ ಹಿಡಿದು ನಡೆಸುತ್ತ ಆಶ್ರಮ ಮುಟ್ಟಿಸುವ ದೃಶ್ಯ ನೋಡುತ್ತಾಳೆ.

ತಾಯಿ ಮಗಳು ಇಬ್ಬರೂ ತಮ್ಮದೇ ಆದ ಅಸ್ತಿತ್ವಕ್ಕಾಗಿ ಹೋರಾಡುತ್ತಿರುತ್ತಾರೆ.ಲೇಖಕಿ ಪಾತ್ರ ಪೋಷಣೆಯಲ್ಲಿ ನುರಿತವರಿದ್ದಾರೆ
ಯಾವ ಪಾತ್ರದ ನಿಲುವು ಸರಿ ಉತ್ತರ ಹುಡುಕುತ್ತಲೆ ಓದುಗ ಇರುತ್ತಾನೆ. ಒಂದು ಅಪರೂಪದ ಕತೆ ಇದು.

೩) ಬೆರಳಂಚಿನ ಬೆಳಕಿಂಡಿ :
-------------------- ಮೋಹನರಾವ್ ನಿವೃತ್ತಿಯನಂತರವೂ ಒಂದು ಎನ್ ಜಿ ಓ ದಲ್ಲಿ ಕೆಲಸಕ್ಕೆ ಇರುತ್ತಾರೆ. ಒಂದು ಥರದ್ ಸುಖಿ ಜೀವನ
ಮಗಳು ಮಗ ಇಬ್ಬರೂ ಕೆಲಸದಲ್ಲಿ ದೂರದ ಊರಲ್ಲಿದ್ದಾರೆ. ಇಮೇಲ್ , ಫೋನ್ ಮೂಲಕ ಮಕ್ಕಳೊಡನೆ ಸಂಪರ್ಕದಲ್ಲಿರುತ್ತಾರೆ.ತಮ್ಮ ಆಫೀಸಿನ ಇತರೆ
ಕಲೀಗ್ಸಜೊತೆಯೂ ಬೆರೆಯಲು ಇಷ್ಟ ಪಡುತ್ತಿರುತ್ತಾರೆ. ಆಫೀಸ್ ಹಿಂದಿನ ಮನೆಯ ನೀರಿನ ಟ್ಯಾಂಕ ಒಂದು ಸೋರುತ್ತಿರುತ್ತದೆ. ಆ ನೀರಿನ ಸೋರಿಕೆ
ಪ್ರಮಾಣ ಎಕ್ಸೆಲ್ ನಲ್ಲಿ ಲೆಕ್ಕ ಹಾಕಿ ಸಹೋದ್ಯೋಗಿಗಳಿಗೆ ತೋರಿಸುತ್ತಾರೆ.ಅವರಿಂದ ನೀರಸ ಪ್ರತಿಕ್ರಿಯೆ ಬರುತ್ತದೆ. ಮೋಹನರಾವ್ ಆ ಮನೆಗೆ
ಫೋನಾಯಿಸಿ ಟ್ಯಾಂಕ್ ಸೋರುವುದರ ಬಗ್ಗೆ ಹೇಳುತ್ತಾರೆ. ಆದರೆ ಆ ಮನೆಯವರು ಇವರನ್ನೇ ದಬಾಯಿಸುತ್ತಾರೆ. ಧೃತಿಗೆಡದ ಮೋಹನರಾವ ಜಲ
ಮಂಡಳಿಗೆ ಒಂದು ಇಮೇಲ್ ಕಳಿಸುತ್ತಾರೆ ---ಅದಕ್ಕೆ ಆಫೀಸಿನ ಲೆಟರ್ ಹೆಡ್ ಬಳಸಿರುತ್ತಾರೆ. ಜಲಮಂಡಳಿಯವರು ಇವರು ಕೊಟ್ಟ ವಿವರ ಆಧರಿಸಿ
ಆ ಮನೆಯವರ ಮೇಲೆ ಕ್ರಮ ಜರುಗಿಸುತ್ತಾರೆ. ಇತ್ತ ಮೀಟಿಂಗ್ ವೇಳೆಯಲ್ಲಿ ಮೇಲಧಿಕಾರಿ ಯಿಂದ ಮೋಹನ್ ರಾವ್ ಗೆ ಬುಲಾವ್ ಬರುತ್ತದೆ.
ದೂರು ನೀಡುವುದಕ್ಕೆ ಆಫೀಸಿನ ಲೆಟರ್ ಹೆಡ್ ಬಳಸಿದ್ದು ಸರಿಅಲ್ಲ ಹಾಗೂ ವಿವರಣೆ ನೀಡಲು ಮೋಹನರಾವ್ ಗೆಹೇಳಲಾಗುತ್ತದೆ. ದ್ವಂದ್ವದಲ್ಲಿ ಸಿಲುಕಿದ
ಮೋಹನರಾವ್ ಮಕ್ಕಳ ಜೊತೆ ಚರ್ಚಿಸುತ್ತಾರೆ. ತಮ್ಮ ನಿಲುವು ಹೇಳುತ್ತಾರೆ. ಮಕ್ಕಳಿಂದ ಅನುಮೋದನೆ ಸಿಗುತ್ತದೆ.ಮರುದಿನ ಒಂದು ತಿಂಗಳ ನಂತರ
ಕೆಲಸ ಬಿಡುವುದಾಗಿ ನೋಟಿಸ್ ಕೊಡುತ್ತಾರೆ. ಅಂದು ಸಂಜೆ ಮನೆಗೆ ಹೋಗುವಾಗ ಎರಡು ಮೊಳ ಮಲ್ಲಿಗೆ ಖರಿದೀಸಿ ಮನೆ ಕಡೆ ನಡೆಯುತ್ತಾರೆ.

ಈ ಬದುಕಿನ ಜಂಜಡಗಳಿಗೆ ನಾವೆಲ್ಲ ಒಗ್ಗಿಹೋಗಿದ್ದೇವೆ ಸುತ್ತಲಲ್ಲಿ ಏನೇ ಅನ್ಯಾಯ ನಡೆದರೂ ಸ್ಪಂದಿಸದೆ ಮೂಕರಾಗಿದ್ದೆವೆ. ಮೋಹನರಾವ್ ಮಿನುಗುವ ತಾರೆ ಯಾಗುತ್ತಾರೆ. ಕನಿಷ್ಠ ಪ್ರತಿಭಟನೆಯೂ ಇಲ್ಲದೇ ಒಣಗುತ್ತಿರುವ ನಮ್ಮಲ್ಲಿ ಹೊಸ ಕಿಡಿ ಹತ್ತಿಸುತ್ತಾರೆ.
ಲೇಖಕಿ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ ಮಹಿಳಾ ಸಾಹಿತ್ಯ ಎಂದು ಮೂಗು ಮುರಿಯುವವರೆಲ್ಲ ಓದಬೇಕು ಈ ಕಥೆ. ಸಂವೇದನೆ ಜೀವಂತವಾಗಿ
ಮಿಡಿದಿದೆ ಈ ಸಂಕಲನದ ಹೈ ಲೈಟ ಈ ಕಥೆ.

೪) ಚಿಗುರು :
----- ಪತ್ನಿ ಸಾವಿನ ನಂತರ ಮಗ ಸೊಸೆಯ ಜತೆ ಇರಲು ಮೂರ್ತಿ ಬಂದಿರುತ್ತಾರೆ. ಮಗ ಸಾಫ್ಟವೇರ್ ಮುಂದಿನ ದಿನಗಳಲ್ಲಿ ಅಮೇರಿಕಾಕ್ಕೆ
ಹೋಗಬೇಕಾಗಿರುತ್ತದೆ.ಸೊಸೆಯೂ ಉದ್ಯೋಗಿ ಅವರ ಪ್ಲಾನಿಂಗ್ ತಪ್ಪಿ ಸೊಸೆ ಬಸಿರಾಗಿರುತ್ತಾಳೆ ಅದು ಅವಳಿಗೆ ಇಷ್ಟ ಇರೋದಿಲ್ಲ ಆದರೆ ಮಗ
ತೆಗೆಸಲು ಒಪ್ಪುತ್ತಿಲ್ಲ ಒಂದುವಾರವಿಡಿ ಇದೇ ವಿಷಯಕ್ಕೆ ವಾದ ವಿವಾದ ನಡೆದಿರುತ್ತದೆ. ಮೂರ್ತಿ ಯಾರಕಡೆಯೂ ವಾಲದೆ ತಟಸ್ಥರಾಗಿರುತ್ತಾರೆ. ಆಗೀಗ
ಸೊಸೆಗೆ ಮನೆಗೆಲಸದಲ್ಲಿ ಸಹಾಯ ಮಾದುತ್ತಿರುತ್ತಾರೆ.ಮಗನಿಗೆ ಅಪ್ಪನ ಈ ಔದಾರ್ಯ ತೋರಿಕೆಯದ್ದು ಅನಿಸುತ್ತದೆ. ಅಮ್ಮನಿಗೆ ಒಂದಿನಿತೂ ಸಹಾಯ ಮಾಡದ ಅಪ್ಪ ಈಗ ಹೀಗೆ ಆಡುತ್ತಿರುವುದು ಸರಿ ಅನಿಸೂದಿಲ್ಲ.
ಮೂರ್ತಿ ಮಗನಿಗೆ ತಿಳಿಹೇಳುತ್ತಾರೆ. ತಾವೀಗ ಬದಲಾಯಿಸಿದ್ದು ಇದು ಹೊಸ ರೂಪ ಅಂತಾರೆ. ಒಂದು ದಿನ ಸೊಸೆಯಿಂದ ಫೋನ ಬರುತ್ತದೆ ಬ್ಲೀಡಿಂಗ್ ಆಗುತ್ತಿರುವುದಾಗಿ ಹೇಳಿದ ಅವಳಿಗೆ ಧೈರ್ಯ ತುಂಬಿ ಡಾಕ್ಟರ್ ಕಡೆ
ಕರೆದೊಯ್ಯುತ್ತಾರೆ.ಸೊಸೆ ಇರ್ಮಾಕ್ಕೆ ಅವಳೊಡನೆ ಬರಲು ಕೇಳಿಕೊಂಡಾಗ ಬದುಕು ತನ್ನ ಮುಂದೆ ಹೊಸ ಸಾಧ್ಯತೆ ತೆರೆದಿಟ್ಟ ಪರಿ ನೋಡಿ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ.

ಮೂರ್ತಿ ಪಾತ್ರ ಪೋಷನೆ ಸರಿಯಾಗಿದೆ. ಹೊಸ ಸವಾಲುಗಳಿಗೆ ಆಯಾಮಗಳಿಗೆ ಅವರು ಒಪ್ಪಿಕೊಳ್ಳುವ ರೀತಿ ಪ್ರಶಂಸನೀಯ. ಚಿತ್ರಿಸಿದ ಲೇಖಕಿ ಅಭಿನಂದನಾರ್ಹರು. ನಿವೃತ್ತಿ ಜೀವನ ನಿಜಕ್ಕೂ ಸವಾಲಿನದು ಪಾತ್ರದ ಒಳಗನ್ನು ಲೇಖಕಿ ನಿರೂಪಿಸಿದ ಬಗೆ ಅನನ್ಯ. ಇದು ನಿಜಕ್ಕೂ ಶುಭ ಸೂಚನೆ. ಕಥೆಯಲ್ಲಿ
ಎಲ್ಲು ಭಾವೋದ್ರೇಕ ವಿಲ್ಲ ಸಮಸ್ಯೆಯನ್ನು ವೈಭವೀಕರಿಸದೆ ನವಿರಾದ ನಿರೂಪಣೆಯಿಂದ ಲೇಖಕಿ ಗೆದ್ದಿದ್ದಾರೆ.

೫) ಮಿಂಚುಹುಳ:
----------
ಅಕ್ಕ ,ತಂಗಿ ಹಾಗೂ ತಮ್ಮ ಬಹಳ ದಿನಗಳ ನಂತರ ಸೇರಿರುತ್ತಾರೆ ಅಕ್ಕನ ಬಾಳಿನಲ್ಲಿ ಎಲ್ಲವೂ ಸರಿ ಇಲ್ಲ ತಮ್ಮನಿಗೆ ಇದು ಗೊತ್ತಾಗಿರುತ್ತದೆ. ತಂಗಿಗೆ ವಿಚಾರಿಸಲು ಹೇಳುತ್ತಾನೆ. ತಂಗಿ ಕೆದಕಿ ಕೇಳಿದಾಗ ಅಕ್ಕ ಬಾಯ್ಬಿಡುತ್ತಾಳೆ. ಅಕ್ಕನ ಗಂಡ ವ್ಯವಹಾರದಲ್ಲಿ ಮುಗ್ಗಾಗಿ ಮೈತುಂಬ ಸಾಲಮಾಡಿಕೊಂಡಿರುತ್ತಾನೆ. ಸಾಲಗಾರರ ಕಾಟ ವಿಪರೀತ... ತಮ್ಮ ಬೇರೆ ಮದುವೆಯಾಗಿ ಬೇರೆ ಇದ್ದ ಅಪ್ಪನನ್ನು ಕರೆಸುತ್ತಾನೆ. ಎಲ್ಲರೂ ತಮಗೆ ಸಾಧ್ಯವಾದ ಸಹಾಯ ಮಾಡಲು ನಿರ್ಧಾರ ಮಾದುತ್ತಾರೆ. ಅಪ್ಪ ಹಾಗೂ ಮಗ ಮೂರು ಲಕ್ಷ ಹೊಂದಿಸಬಹುದು ...ತಂಗಿ ಊರಿಗೆ ಹೋಗಿ ಕೈಲಿ ಸಾಧ್ಯವಾದಷ್ಟು ಮಾಡುವುದಾಗಿ ಅಭಯ ಕೊಡುತ್ತಾಳೆ.ಇತ್ತ ತಂಗಿಯ ಗಂಡ ತಂಗಿಗೆ ಪ್ರಾಕ್ಟಿಕಲ್ ಆಗಿರಲು ಬೊಧನೆ ಮಾಡುತ್ತಾನೆ ಆದರೆ ಅಕ್ಕನಿಗೆ ಸಹಾಯ ಮಾಡಲೇಬೇಕು ಎಂದು ನಿರ್ಧಾರ ತಳೆದ ತಂಗಿ ಗೆಳತಿ ಹತ್ರ ಸಾಲ ಮಾಡಿ ಅಕ್ಕನಿಗೆ ಕಳಿಸಿಕೊಡುತ್ತಾಳೆ. ತಾನು ಪಾರ್ಟುಟೈಮ್ ಕೆಲಸ ಹಿಡಿದು ಮೂರುತಿಂಗಳಿಗೆ ಇಪ್ಪತ್ತು ಸಾವಿರ ಕೂಡಿ ಅದನ್ನು ಗೆಳತಿಗೆ ವಾಪಾಸ್ ಕೊದುವುದಕ್ಕೆ ಹೋಗಲು ಬಸ್ ಏರುತ್ತಾಳೆ ಬಸ್ಸಿನಲ್ಲಿ ಹಣ ಕಳುವಾಗುತ್ತದೆ...ಕಂಗೆಟ್ಟರೂ ಸೋಲು ಒಪ್ಪಿಕೊಳ್ಳದ ತಂಗಿ ಮತ್ತೆ ಹೋರಾಡಲು ತಯಾರಾಗುತ್ತಾಳೆ.

ಈಗಿನ ದಿನಮಾನಗಳಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರಾಗುವುದು ಕನಸೇ ಸರಿ..ಅದೂ ಬಂಧುಗಳಗಿದ್ದರಂತೂ ಇನ್ನೂ ಕಠಿಣ... ಲೇಖಕಿ ಸಂಬಂಧಗಳ ಸುತ್ತ ಸಾಗುವ ಏಳು ಬೀಳು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ಎಲ್ಲೂ ವಾಲದೆ ಸರಿ ತಪ್ಪು ವಿವೇಚನೆ ಓದುಗನಿಗೆ ಬಿಡುವ ಕಲೆಅವರಿಗೆ ಕರಗತ ಆಗಿದೆ.
ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಈ ಕತೆ ಚೇತೋಹಾರಿಯಾಗಿದೆ...

ಎಲ್ಲ ಹೇಳಿಯಾಗಿದೆ ಆದರೂ ಹೇಳುವೆ ಈ ಸಂಕಲನದ ಉಳಿದ ಕತೆಗಳೂ ಚೆನ್ನಾಗಿವೆ. ಹಾಗೆಯೇ ಛಂದ ಪುಸ್ತಕದ ಅಪಾರ ಹಾಗೂ ವಸುಧೇಂದ್ರ ಅಭಿನಂದನಾರ್ಹರು. ಅವರ ಪ್ರಯತ್ನ ಹೀಗೆಯೇ ಸಾಗಲಿ.....!

ಸೋಮವಾರ, ಜೂನ್ 8, 2009

ಕೊಡುವುದೇನು ಕೊಂಬುದೇನು---ಸುನಂದಾ ಬೆಳಗಾಂವಕರ್

ಸುನಂದಾ ಬೆಳಗಾವಕರ ಕನ್ನಡ ಮಹಿಳಾ ಲೇಖಕರಲ್ಲಿ ಎದ್ದು ಕಾಣುವ ಹೆಸರು. ತೀರ ಇತ್ತೀಚೆಗೆ ಬರೆಯಲು ಪ್ರಾರಂಭಿಸಿದ
ಇವರು ಝಾಂಬಿಯಾ ದೇಶದಲ್ಲಿದ್ದಾಗ ರಾಮಚಂದ್ರ ಶರ್ಮರ ಒತ್ತಾಸೆಗೆ ಕಟ್ಟುಬಿದ್ದು ತಾವು ಬರೆದ ಪ್ರಬಂಧ ಸುಧಾಕ್ಕೆ ಕಳಿಸಿದರಂತೆ ಎಂಬಿಸಿಂಗ್ ಸಂಪಾದಕರಾಗಿದ್ದರು ನಮ್ಮಕನ್ನಡದ ಪುಣ್ಯ ಅವರ ಕೈ ತುತ್ತು ಓದುಗರ ಮನೆ ಮಾತಾಯಿತು. ನಾ ಹೇಳ
ಹೊರಟಿರುವುದು ಅವರ "ಕೊಡುವುದೇನು ಕೊಂಬುದೇನು" ಪುಸ್ತಕದ ಬಗ್ಗೆ.

"ಕೊಡುವುದೇನು ? ಕೊಂಬುದೇನು? ಒಲವು,ಸ್ನೇಹ,ಪ್ರೇಮ ಹೊರಗೆ ಬರಿದು ,ಒಳಗೆ ನಲಿದು ಇದ್ದವರಿಗೆ ನೇಮ" ಬೇಂದ್ರೆ ಅವರ ಈ
ಕವನದ ಸಾಲು ಈ ಪುಸ್ತಕದಲ್ಲಿ ಅಂತರಗಂಗೆ ಯಾಗಿ ಪ್ರವಹಿಸುತ್ತದೆ.. ಪ್ರಸ್ತುತ ಪುಸ್ತಕವನ್ನು ವ್ಯಕ್ತಿ ಚಿತ್ರಣ ಅನ್ನಬೇಕೋ ಅಥವಾ
ಪ್ರಬಂಧ ಎನ್ನಬೇಕೋ ಎಂಬ ಗೊಂದಲ ಬಹುಷಃ ಲೇಖಕಿಯನ್ನು ಕಾಡಿರಬೇಕು.. ಅದೇನೆ ಇರಲಿ ಸುನಂದಾ ಅವರು ಈ ಸಂಕಲನದಲ್ಲಿ ತಾವು ಕಂಡ ತಾವು ಕೇಳಿತಿಳಿದ ವ್ಯಕ್ತಿಗಳ ಬಗ್ಗೆ ಬರೆಯುತ್ತಾರೆ...ಆ ಪಾತ್ರಗಳ ಸುಖ ದುಃಖ ,ನೋವು ನಲಿವು ,ಪ್ರೀತಿ ಅಂತಃಕರಣ ನಮ್ಮನ್ನು ತೀವ್ರವಾಗಿ ತಟ್ಟುತ್ತವೆ. ಮಾನವತೆ ಅಳಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ಲೇಖಕಿ ಸೃಷ್ಟಿಸಿದ ಪಾತ್ರಗಳು ಸಂಜೀವಿನಿ ಯಾಗಿ ತೋರುತ್ತವೆ.

ಪಾತ್ರಗಳು ಎಂತೆಂತವು.. ಬೆಬ್ರಾ --ಬೆಲ್ಲ ಬೇಡುವ ಬ್ರಾಹ್ಮಣ ನ ಕತೆ ಎದೆ ಕಲಕದೆ ಬಿಡಲಾರದು...ಆ ಯಲಗೂರಿನ ಕಡಖ್ ಹಣಮಪ್ಪ, ಬಸಿರ ಬಯಕೆ ತಡೆಯದೆ ಬಾಯಿಗೆ ಹೂರಣ ಹಾಕಿಕೊಂಡವಳನ್ನು ಕ್ಷಮಿಸಲಾರದೇ ಹೋದ ಬೆಬ್ರಾ ನ ನಶೀಬಿಗೆ ಕಾರಣವಾದ.

ಮಳೆಗಾಲದಲ್ಲಿ ಎಲ್ಲೆಲ್ಲಿಯೂ ಧಂಡಿಯಾಗಿ ಬೆಳೆಯುವ ಹೊನಗನ್ನಿ ಅದರ ಜತೆ ತಳಕು ಹಾಕಿಕೊಂಡ ಒಂದು ಪಾತ್ರ ಆ ಪಾತ್ರದ
ದುರಂತ ..ಬಹುಷಃ ಮಾಸ್ತಿ ನಂತರ ಇಷ್ಟು ನವಿರಾದ ಪಾತ್ರ ಚಿತ್ರಣ ಯಾರೂ ಮಾಡಿರಲಿಕ್ಕಿಲ್ಲ.

ಝಾಕಣಿಲೆ ಬಡಸಬೇಕು ಬುರುಬುರಿ ಗೋವಿಂದಾಚಾರ್ ರಿಗೆ ತಿನ್ನಾಸ ಬಡಕ ಇರಬಹುದು ಆದರೆ ಆ ಪಾತ್ರದ ಹಿಂದೆಯೂ ಕಳಕಳಿ
ಇದೆ ನೋವಿದೆ ಒಂದು ಸುಂದರ ಕತೆಯಿದೆ.

ಇಡೀ ಪುಸ್ತಕದಲ್ಲಿ ಅಂತಃಕರಣ ಕಲಕುವ ಎರಡು ಪಾತ್ರಗಳು ’ರಾಜಕ್ಕ--ಕಮಲಕ್ಕ,’ ನಮ್ಮ ಹಿರಿಯರು ಅನೇಕ ತಪ್ಪು ಮಾಡಿದ್ದರು ಅದಕ್ಕೆ ನಿದರ್ಶನ ವಿಧವಾ ಹೆಂಗಸರ ಗೋಳು. ಮೇಲಿನ ಎರಡೂ ಪಾತ್ರ ಆ ದುರ್ವಿಧಿಗೆ ಬಲಿಯಾದವರು. ತಮ್ಮನ ಬಾಳು ಹಸನಾಗಲೆಂದು ಜೀವ ತೇದವರು.... ತಮ್ಮನ ಮಕ್ಕಳಿಬ್ಬರನ್ನೂ ಅವರು ಬೆಳೆಸಿದ ಪರಿಯಾದರೂ ಎಂತಹುದು..."ನಮ್ಮಕ್ಕ ಬಂಗಾರ
ವಸ್ತಾತಣ್ಣಗ ಹತ್ತಾವ ಅಂತ ಅಳತಿದ್ಲಂತ. ಹಬ್ಬದ ದಿನ ಅಕಿಗೆ ವಸ್ತ ಇಡಿಸೂದಂದ್ರ ಅವರಿಬ್ಬರಿಗೂ ಬಹಳ ತ್ರಾಸು. ಇಬ್ಬರು ಗಂಡುಹುಡುಗರು ಸತ್ತ ಮ್ಯಾಲ ಹುಟ್ಟಿದ ಮಗಳು ಅಕಿನ್ನ ಅಳಿಸೋ ಹಂಗಿಲ್ಲ. ಅವಳಿಗೆ ಉಡಿಸಿ ತೊಡಿಸಿ ನೋಡೋ ಆಶಾ ಅವರಿಗೆ
ಪಾಪ ನಮ್ಮ ಅತ್ಯಾರಿಬ್ರು ಅಕಿನ್ನ ರಮಿಸಿ ,ವಸ್ತಾ ಸೆರಗ ಮುಚ್ಚಿ ತಮ್ಮ ಹೊಟ್ಟಿಮ್ಯಾಲ ಇಟಗೊಂಡ ಬಿಸಿ ಮಾಡಿ ಇಡಸತಿದ್ರಂತ"
ಇಂತಹ ಕಳಕಳಿ ಬೇರೆಯವರ ಮ್ಯಾಲ ಆದ್ರ ಸ್ವಂತಕ್ಕೆ ಏನು ಕಂಡು ಕೇಳರಿಯದ ವ್ರತ."ಮನೆ ಆಕಳುಗಳನ್ನು ಒಂದು ತಿಂಗಳು ಅಡವಿಗೆ ಮೇಯಲು ಬಿಡುವಂತಿಲ್ಲ ಕೊಟ್ಟಿಗೆಯಲ್ಲಿಯೇ ಇಡುವುದು ,ದಿನ ನಿತ್ಯ ಕೊಟ್ಟಿಗೆ ಸ್ವಚ್ಛ ಮಾಡಿ ಮೈ ತೊಳೆಯುವುದು ಹುಲ್ಲು ಮೇವುಗಳೊಂದಿಗೆ ಅವುಗಳಿಗೆ ಜೋಳ ತಿನಿಸುವುದು . ಅವುಗಳ ಸೆಗಣಿಯಲ್ಲಿ ಬೀಳುವ ಜೋಳ ಆರಿಸಿ ,ತೊಳೆದು ಒಣಗಿಸಿ ಆ ಕಾಳುಗಳ ಹಿಟ್ಟಿನಿಂದ ಮಾಡಿದ ಗಂಜಿಯನ್ನು ಕುಡಿಯುವುದು..." ಯಾಕಾಗಿ ಇಂತಹ ವೃತ ..."ಮುಂದಿನ ಜನ್ಮದಾಗ ನಮಗ ಈ ವಿಧವತ್ವ
ಬೇಡ ಅದಕ್ಕ ಪರಮಾತ್ಮಗ ನಮ್ಮ ಪ್ರಾರ್ಠನಾ"
ಮೇಲಿನ ವಾಕ್ಯಓದಿ ಎಂತಹ ಕಲ್ಲೆದೆಯೂ ಕರಗುತ್ತದೆ. ಇಂತಹ ವ್ಯಕ್ತಿಗಳೂ ಇಲ್ಲಿದ್ದರೇ ಎನ್ನುವ ಪ್ರಶ್ನೆ ಕಾಡುತ್ತದೆ.
ಸುನಂದಾ ಅವರ ಲೇಖನಗಳಲ್ಲಿ ಎಲ್ಲೂ ಆಕ್ರೋಶವಿಲ್ಲ ,ಘೋಷಣೆ ಗಳಿಲ್ಲ ಆದರೆ ಅಂತರಗಂಗೆ ಯಾಗಿ ಹರಿಯುವ ಕಳಕಳಿ ನನ್ನ
ಎದೆ ಕರಗಿಸಿದೆ... ಈ ಲೇಖ ಬರೆಸಿದೆ.....

ಬುಧವಾರ, ಮೇ 27, 2009

ಡಾ.ನಾ ಡಿಸೋಜರ ಕುರ್ಚಿ ಕತೆ

ಮಯೂರ-ಮೇ-೨೦೦೯ ರಲ್ಲಿ ಈ ಕತೆ ಪ್ರಕಟವಾಗಿತ್ತು. ಹಾಗೆ ನೋಡಿದರೆ "ನಾಡಿ" ಅನೇಕ ದಿನಗಳಿಂದ ಕತೆ ಬರೆಯಿತ್ತಿದ್ದಾರೆ
ಅನೇಕ ಆಯಾಮಗಳಲ್ಲಿ ಕೈ ಆಡಿಸಿದ್ದಾರೆ.ಯಾರ ಮನಸ್ಸಿಗೂ ನೋವಾಗದ ಹಾಗೆ ಆದರೆ ನೇರವಾಗಿ ಹೇಳುವ ಕಲೆಗಾರಿಕೆ ಇವರಿಗೆ ಸಿದ್ದಿಸಿದೆ. ಇನ್ನು ಪ್ರಸ್ತುತ ಕುರ್ಚಿಯ ಕತೆಗೆ ಬರೋಣ....


"ಕುರ್ಚಿ" ಇದು ನಮ್ಮ ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾದ ಒಂದು ವಿಶಿಷ್ಟ ಅಧಿಕಾರ ಸೂಚಿಸುವ ಪದ. ಹಿಂದೆಲ್ಲ ರಾಜ
ಮಹಾರಾಜರು ಸಿಂಹಾಸನಕ್ಕೆ ಬಡಿದಾಡುತ್ತಿದ್ದರು ಕುರ್ಚಿ ಇದು ಅಧಿಕಾರ ಚಲಾಯಿಸುವವರ ಸೊತ್ತಾಗಿ ಬಿಂಬಿತವಾಗುತ್ತಲೇ ಇದೆ.
ಪ್ರಸ್ತುತ ಕತೆ ಇರುವುದು ಆ ಒಂದು ಸಂಘರ್ಷದ ಸುತ್ತಲೇ....ಕಣಸೇ ಜಟ್ಯಪ್ಪ ಹಾಗೂ ಒಡೆಯರ ನಡುವೆ ತಿಕ್ಕಾಟ ಇದ್ದೇ ಇದೆ
ಒಡೆಯನ ಹೊಲದ ಗೇಣಿದಾರ ಅಂದ ಮಾತ್ರಕ್ಕೆ ನಿಯಮ ಪಾಲಿಸಿಕೊಂಡು ಬರಲೇ ಬೇಕು ಎಂಬ ಧೋರಣೆಗೆ ವಿರುದ್ದವಾಗಿ
ನಡೆಯ ಬಯಸಿದವ.ಒಡೆಯರಿಗೂ ಇವನ ಬಗ್ಗೆ ಮುನಿಸಿದೆ ಉಳಿದವರಂತೆ ಇವನನ್ನು ಮಣಿಸಲಾಗುತ್ತಿಲ್ಲ ಇದು ಅವರಿಗೆ ಅಸಮಾಧಾನ ತರುತ್ತದೆ.ನುಂಗಿಕೊಂಡಿರುತ್ತಾರೆ. ಬೇರೆ ಊರಿಗೆ ವರ್ಗವಾಗಿ ಹೋದ ಮಿರಾಂದ ಮಾಸ್ತರರು ಬಿಟ್ಟು ಹೋದ ಹಳೆ
ಮುರುಕಲು ಕುರ್ಚಿ ಜಟ್ಯಪ್ಪ ರಿಪೇರಿ ಮಾಡಿಸುತ್ತಾನೆ. ಆಚಾರಿ ಹೇಳಿದ ಮಾತಿಗೆ ಸೊಪ್ಪು ಹಾಕದೆ, ಊರವರ ಕೀಟಲೆಗೆ ಹೆದರದೆ ಹೆಂಡತಿಯ ಕಳವಳಗಳಿಗೆ ಸೊಪ್ಪು ಹಾಕದೇ ಆ ಮಡಚುವ ಕುರ್ಚಿ ಮೇಲೆ ಕೂಡುತ್ತಾನೆ. ರಾಮೇಶ್ವರ ಯುವಕ ಸಂಘದವರು ಆಡಲಿರುವ "ಶನಿಮಹಾತ್ಮೆ" ನಾಟಕದ ದಿನ ಊರಿನ ಜನ ಇನ್ನೊಂದು ವಿಚಿತ್ರ ಪ್ರಸಂಗ ನೊಡುತ್ತಾರೆ ನಾಟಕ
ನೋಡಲು ಒಡೆಯರು ಬರುತ್ತಾರೆ ಎಂದು ಸೂಚ್ಯ ವಾಗಿ ಅವರ ಆಳು ಅವರ ಕುರ್ಚಿ ತಂದು ಇರಿಸುತ್ತಾನೆ.. ಸ್ವಲ್ಪ ಹೊತ್ತಿನ ನಂತರ ಒಡೆಯರು ಠೀವಿಯಿಂದ ಅದರಲ್ಲಿ ಕುಳಿತುಕೊಳ್ಳುತ್ತಾರೆ....ಆಗ ಜಟ್ಯಪ್ಪ ಬರುತ್ತಾನೆ ತನ್ನ ಮಡಚುವ ಕುರ್ಚಿ ಜತೆ.
ಒಡೆಯರಿಗೆ ಅನತಿ ದೂರದಲ್ಲಿ ಕುರ್ಚಿ ಹಾಕಿಕೊಂಡು ಕುಳಿತ ಅವನನ್ನು ನೋಡಿ ದಿಗಿಲು ಆದರೆ ಕೆಲವರು ಸಿಳ್ಳೆಹಾಕಿ ,ಕೇಕೆಹೊಡೆದು ತಮ್ಮ ಮೆಚ್ಚಿಗೆ ಸೂಚಿಸುತ್ತಾರೆ.. ಒಡೆಯರು ಪೂರ್ತಿ ನಾಟಕ ನೋಡದೆ ಎದ್ದು ಹೋಗುತ್ತಾರೆ.ಮುಂದೆ ಊರಲ್ಲಿ ಎಲ್ಲೇ ಸಭೆ, ಸಮಾರಂಭ ಆಗಲಿ ಮೇಲಿನ ಸೀನು ಪುನರಾವರ್ತನೆ ಆಗುತ್ತದೆ. ಜಟ್ಯಪ್ಪನದು ಬಹಳ ಸರಳ ತತ್ವ
"ರೈತರು ಹುಲ್ಲು ,ಚಾಪೆ , ಕಂಬಳಿ ಹಾಸಿಕೊಂಡು ಕುಳಿತುಕೊಳ್ಳಬೇಕು ಎಂಬ ನಿಯಮ ಎಲ್ಲಿದೆ? ತಾವೇಕೆಕುರ್ಚಿ ಹಾಕಿಕೊಂಡು
ಕೂರಬಾರದು? ಜಮೀನು ಒಡೆಯರದ್ದು ನಿಜ ಆದರೆ ಈ ಜಮಿನಿನಲ್ಲಿ ಮುಕಳಿ ಮೇಲೆ ಮಾಡಿಕೊಂಡು ಬೆಳೆ ತೆಗೆಯುವವರು
ನಾವಲ್ಲವೆ?"
ಬಹುಷಃ ಈ ದೇಶದ ಎಲ್ಲ ರೈತರ ಒಳದನಿ ಇದೇ ಆಗಿದೆ ಅಲ್ಲವೇ ? ಕತೆಗಾರ ಚೆನ್ನಾಗಿ ಸ್ಕೋರ್ ಮಾಡತಾರೆ.
ಕತೆ ತಿರುವು ತೆಗೆದುಕೊಳ್ಳುತ್ತದೆ ಜಟ್ಯಪ್ಪ ನೆಟ್ಟ ಬಂಡಾಯದ ಬೀಜ ಬೇರೆ ರೀತಿಯಲ್ಲಿ ಟಿಸಿಲೊಡೆಯುತ್ತದೆ. ಬೀರನ ಮಗ
ತೋರಿಸಿದ ಕರಾಮತ್ತು ಎಂತಾದು ಬೀರನ ಜೊತೆ ಒಡೆಯನ ಮನೆಗೆ ಅವನ ಮಗ ಬೀರ ಕೈ ಕಟ್ಟಿ ತಲೆ ತಗ್ಗಿಸಿ ಅಪ್ಪ ವಿಧೇಯನಾಗಿ ನಿಲ್ಲುತ್ತಾನೆ ಆದರೆ ಮಗ ನೋಡಿ ಒಡೆಯರ ಎದಿರು ಖಾಲಿ ಇದ್ದ ಕುರ್ಚಿ ಮೇಲೆ ಕುಳಿತ. ಒಡೆಯರ ಕಣ್ಣಲ್ಲಿ ಬೆಂಕಿ ಆದರೆ ಕೈ ಹಿಸುಕಿಕೊಳ್ಳುತ್ತಾರೆ. ಬೀರನ ಮಗ ಹೇಳೋದು "ಕುರ್ಚಿ ಇರಾದು ಕೂರೋಕೆ ಅಲ್ವಾ". ಜಟ್ಯಪ್ಪ ಬೀರನ
ಮಗನನ್ನು ಕಂಡು ಅಭಿನಂದಿಸುತ್ತಾನೆ.

ಇಡೀ ಕತೆ ಗಮನಿಸಿದರೆ ಶೋಷಿತರ ಪರಇದೆ. ಆದರೆ ಎಲ್ಲೂ ಅಬ್ಬರವಿಲ್ಲ ಜೋರಿಲ್ಲ ಆದರೂ ಈ ಕತೆ ಅಂತಃಕರಣ
ಕಲಕುತ್ತದೆ ಒಂದರೆ ಕ್ಷಣ ನಾವು ಕುಳಿತ ಕುರ್ಚಿ ಗಳ ಹಿಂದೆಯೂ ಯಾರದೋ ನರಳಾಟ ಇದೆ ಅಂತ ಅನಿಸುತ್ತದೆ....