ಭಾನುವಾರ, ಡಿಸೆಂಬರ್ 6, 2009

ಅಲ್ಬರ್ಟೊ ಮೊರಾವಿಯಾ...conjugal love

ಅಲ್ಬರ್ಟೊಮೊರಾವಿಯಾ ಇಟಲಿ ದೇಶದ ಪ್ರಸಿದ್ಧ ಹಾಗೂ ಅಷ್ಟೇ ವಿವಾದಾತ್ಮಕಲೇಖಕ.ಇಪ್ಪತ್ತನೇ ಶತಮಾನದ ಪ್ರಮುಖ ಇಟಾಲಿಯನ್ ಲೇಖಕರಲ್ಲಿ ಅವ ಒಬ್ಬ. ಅವನ ಕತೆ,ಕಾದಂಬರಿಗಳು ಈ ವಿವಾಹ,ಪ್ರೇಮ ಹಾಗೂ ಅದರಲ್ಲಡಗಿದ
ಹಿಪಾಕ್ರಸಿಗಳ ಸುತ್ತ ಕೇಂದ್ರಿಕೃತವಾಗಿದ್ದವು. ಹೇಗೆ ಮನುಷ್ಯ ಅರ್ಥವಿಲ್ಲದ ನಂಬಿಕೆಗಳ ಜೊತೆ ರಾಜಿಮಾಡಿಕೊಂಡು ಜೀವಿಸುತ್ತಿದ್ದಾನೆ ಇದರ ಚಿತ್ರಣ ಅವ ಸೃಷ್ಟಿಸಿದ ಪಾತ್ರಗಳಲ್ಲಿ ಕಾಣಬಹುದು. ಅವನ ಕೆಲವು ಕಾದಂಬರಿಗಳು ಸಿನೆಮ ಸಹ
ಆಗಿವೆ.೧೯೫೭ ರ ಸೋಫಿಯಾ ಲಾರೆನ್ ಳ two women ಮುಂತಾದವು. ತನ್ನ ನಿಲುವುಗಳನ್ನು ನಿರ್ಭಿಡೆಯಿಂದ ಪ್ರಸ್ತುತ ಪಡಿಸುತ್ತಿದ್ದ ಮೊರಾವಿಯಾ ವಿವಾದಾತ್ಮಕ ಲೇಖಕ ಎಂದು ಕೂಡ ಹೆಸರು ಗಳಿಸಿದ್ದ.

ಪ್ರಸ್ತುತ conjugal love ಕೂಡ ವಿವಾಹ ವ್ಯವಸ್ಥೆಬಗ್ಗೆ ಕೇಂದ್ರಿತವಾಗಿದೆ.ಸ್ವಲ್ಪದರಲ್ಲಿ ಕತೆ ಬಗ್ಗೆ
ಹೇಳುವೆ.ಕಥಾನಾಯಕ ಸಿಲ್ವಿಯೋ ಅವನಿಗೆ ಚೆಂದದ ಹೆಂಡತಿ ಲಿಡಾ. ಲಿಡಾ ಮೇಲೆ ಸಿಲ್ವಿಯೋನಿಗೆ ವಿಪರೀತ ಪ್ರೀತಿ,
ಮೋಹ. ಆ ಮೋಹ ಅವನೊಳಗೆ ಅವಿರತವೂ ಜ್ವಾಲೆಯಾಗಿ ಉರಿಯುತ್ತಿರುತ್ತದೆ.ಅವಳ ಮುಂದೆ ಜಗತ್ತು ಶೂನ್ಯ ಇದು
ಅವನ ಭಾವನೆ. ಅವನೊಳಗೆ ಇನ್ನೊಂದು ಹಂಬಲ ಇರುತ್ತದೆ. ತಾನೊಬ್ಬ ಲೇಖಕ ಆಗಬೇಕು ಸಣ್ಣಪುಟ್ಟದಾಗಿ ಬರೀತಿರ್ತಾನೆ
ಆದರೆ ಅವುಗಳಿಂದ ಅವನಿಗೆ ತೃಪ್ತಿ ಸಿಕ್ಕಿರುವುದಿಲ್ಲ ತನ್ನಿಂದ ಒಂದು ಮಹೋನ್ನತ ಕೃತಿ ಹೊರಬರಬೇಕು ಇದು ಅವನ ತುಡಿತ.
ಆದರೆ ಲಿಡಾಳ ಮೇಲಿನ ಅತಿಪ್ರೀತಿ ಅವನ ಸಾಮರ್ಥ್ಯ ಕುಗ್ಗಿಸಿದೆ ಇದು ಅವನು ನಂಬಿದ ಸತ್ಯ. ಒಂದು ನಿರ್ಧಾರಕ್ಕೆ ಬರುತ್ತಾನೆ ತನ್ನ ಕೃತಿ ಮುಗಿಯುವವರೆಗೂ ಲಿಡಾಳಿಂದ ದೈಹಿಕವಾಗಿ ದೂರ ಇರೋದು. ತನ್ನ ನಿರ್ಣಯ ಹೆಂಡತಿಗೂ ತಿಳಿಸುತ್ತಾನೆ. ಗಂಡನ ಈ ನಿಲುವು ವಿಚಿತ್ರ ಅನಿಸುತ್ತದೆ ಲಿಡಾಳಿಗೆ ಆದರೆ ಗಂಡನ ಮಹತ್ವಾಕಾಂಕ್ಷೆ ಈಡೇರಿಸಲು ಅವಳು
ಸಮ್ಮತಿಸುತ್ತಾಳೆ. ಊರ ಹೊರಗಿನ ಒಂದು ಪ್ರಶಾಂತವಾದ ವಿಲ್ಲಾಕ್ಕೆ ಅವರಿಬ್ಬರೂ ಹೋಗುತ್ತಾರೆ.ಸಿಲ್ವಿಯೋನ ಚರ್ಮ ಅತಿ
ಸೂಕ್ಷ್ಮದ್ದು. ಸ್ವತಃ ಅವನೆಂದೂ ಶೇವ್ ಮಾಡಿಕೊಳ್ಳುತ್ತಿರಲಿಲ್ಲ. ಊರಲ್ಲಿದ್ದಾಗ ಸಲೂನಿಗೆ ಹೋಗುತ್ತಿದ್ದ ಈಗ ವಿಲ್ಲಾದಲ್ಲಿ ಸಮಸ್ಯೆ ಯಾಗಿತ್ತು.ಸಮಸ್ಯೆಗೆ ಪರಿಹಾರ ಎಂಬಂತೆ ಪಕ್ಕದ ಹಳ್ಳಿಯ ಕ್ಷೌರಿಕ ಅಂತೊನಿಯೋ ಸಿಗುತ್ತಾನೆ. ದಿನಾ ಬಂದು ಸಿಲ್ವಿಯೋನ ಸೇವೆ ಮಾಡುತ್ತಾನೆ.ಇತ್ತ ಸಿಲ್ವಿಯೋನ ಬರವಣಿಗೆ ಹೊಸ ಹುರುಪು ,ಗತಿ ಪಡೆದುಕೊಂಡಿರುತ್ತದೆ. ತನ್ನ ರಚನೆಯ ಮೇಲೆ ವಿಶ್ವಾಸ ಅವನಿಗೆ ಇಮ್ಮಡಿಯಾಗಿರುತ್ತದೆ. ಲಿಡಾ ಸಹ ಹೊಂದಿಕೊಂಡಿರುತ್ತಾಳೆ.ಒಂದಿನ ಲಿಡಾ ಗಂಡನಿಗೆ
ಮೊರೆ ಇಡುತ್ತಾಳೆ ಅಂತೋನಿಯೋ ನನ್ನು ಬಿಡಿಸಲು .ಹೆಂಡತಿಯ ಈ ವಿಚಿತ್ರ ಬೇಡಿಕೆ ಸಿಲ್ವಿಯೋಗೆ ಗಲಿಬಿಲಿ ಮಾಡುತ್ತದೆ.
ತನ್ನ ಸೂಕ್ಷ್ಮ ಚರ್ಮ,ತಪ್ಪದೆ ಬರುವ ಅವನಿಂದ ಎಷ್ಟು ಉಪಕಾರ ಆಗಿದೆ ಇದನ್ನು ಲಿಡಾಗೆ ತಿಳಿಸುತ್ತಾನೆ. ತಾನು ಮಾಡುತ್ತಿರುವ ಕೆಲಸ ಮುಗಿಯಲು ಬಂದಿದೆ ತೃಪ್ತಿ ತಂದಿದೆ ಇದು ಸಿಲ್ವಿಯೋನಿಗೆ ಸಮಾಧಾನದ ವಿಷಯ.
ಒಂದು ಬೆಳದಿಂಗಳ ರಾತ್ರಿ ಫಕ್ಕನೆ ಎಚ್ಚರವಾದ ಸಿಲ್ವಿಯೋಗೆ ಲಿಡಾ ಮನೆಯಲ್ಲಿ ಇಲ್ಲದಿರುವುದು ಗೊತ್ತಾಗುತ್ತದೆ. ವಿಲ್ಲಾದ ಹೊರಗೆ ಬಿದ್ದಾಗ ಮುಂದೆ ಸ್ವಲ್ಪ ದೂರದಲ್ಲಿ ಲಿಡಾ ಕಾಡಲ್ಲಿ ನಡೆದುಹೋಗುತ್ತಿರುವುದು ಕಾಣುತ್ತದೆ.
ಗುಡ್ಡ ಸಲೀಸಾಗಿ ಏರಿ ತಾವು ಅವಾಗಾವಾಗ ಹೋಗಿ ಕೂಡುತ್ತಿದ್ದ ಎತ್ತರದ ಕಟ್ಟೆಯತ್ತ ಅವಳು ಹೊರಟಿದ್ದಾಳೆ ಇದು ಸಿಲ್ವಿಯೊನ
ಅರಿವಿಗೆ ಬರುತ್ತದೆ. ಹಿಂಬಾಲಿಸುತ್ತಾನೆ.ಹಾಲು ಚೆಲ್ಲಿದ ಬೆಳದಿಂಗಳು ಅನತಿ ದೂರದಲ್ಲಿ ಲಿಡಾ ನೋಡುತ್ತಿದ್ದಂತೆ ಅಂತೊನಿಯೋ ಅಲ್ಲಿ ಪ್ರತ್ಯಕ್ಷ ಆಗುತ್ತಾನೆ. ಒಬ್ಬರನ್ನೊಬ್ಬರನ್ನು ತಬ್ಬಿಕೊಂಡ ಅವರು ಕತ್ತಲೆಯಲ್ಲಿ ಕರಗುತ್ತಾರೆ.ಮನೆಗೆ ವಾಪಸ್ಸಾದ ಸಿಲ್ವಿಯೋನಲ್ಲಿ
ಅನೇಕ ದ್ವಂದ್ವಗಳು. ಯಾವುದು ಸರಿ ಯಾವುದು ತಪ್ಪು ಈ ಗೊಂದಲದಲ್ಲಿ ಮುಳುಗುತ್ತಾನೆ.ತನ್ನೆಲ್ಲ ಹಂಬಲಗಳು, ಹವಣಿಕೆಗಳು ಕರಗಿಹೋಗಿದ್ದಕ್ಕೆ ಪರಿತಪಿಸುತ್ತಾನೆ. ಲಿಡಾಳನ್ನು ದೋಷಿ ಎಂದು ನಿರ್ಧರಿಸಿದವ ಅವಳ ಈಗಿನ ಸ್ಥಿತಿಗೆ ತನ್ನ ಪಲುದಾರಿಕೆಯೂ ಇದೆ ಈ ಸತ್ಯ ಅವನನ್ನು ಬಾಧಿಸಿತು. ತಾನು ಅಷ್ಟು ಪ್ರೀತಿಯಿಂದ ಆಸ್ಥೆಯಿಂದ ಬರೆದ ಕೃತಿ ನಿಜಕ್ಕೂ ಒಂದು ಸಾಧಾರಣ ರಚನೆಯಾಗಿ ತೋರಿತು. ತನ್ನ ಈ ಹೊಸ ಅನುಭೂತಿಬಗ್ಗೆ ಮರುದಿನ ಲಿಡಾ ಜತೆ ಚರ್ಚಿಸುತ್ತಾನೆ.ಓರ್ವ ವ್ಯಕ್ತಿಯನ್ನು ಪ್ರೀತಿಸುವುದೆಂದಎ ಅವನ/ಅವಳ ಸೌಂದರ್ಯ, ಗುಣ, ರೂಪ ಮಾತ್ರವಲ್ಲ ಅವರ ದೌರ್ಬಲ್ಯವನ್ನೂ ಪ್ರೀತಿಸಿದರೆ ಮಾತ್ರ ಅದು ಪರಿಪೂರ್ಣ ಪ್ರೀತಿ ಅನಿಸಿಕೊಳ್ಳುತ್ತದೆ.ಇದು ಸಿಲ್ವಿಯೋ ಕಂಡುಕೊಂಡ ಹಾಗೂ ಪಾಲಿಸಿದ ಜೀವನ ಸತ್ಯ.

ಮೊರಾವಿಯಾನ ಕೃತಿ ಅನೇಕ ಪ್ರಶ್ನೆ ಹುಟ್ಟುಕಾಕುತ್ತದೆ.ಮೊರಾವಿಯಾ ಮೂಗು ತೂರಿಸಿ ಇದು ನೈತಿಕ ಇದು ಅನೈತಿಕ ಎಂದು ನಿರ್ಣಯ ಹೇಳೋದಿಲ್ಲ. ಪಾತ್ರಗಳು ತಮ್ಮಲ್ಲೆ ಪರಾಮರ್ಶಿಸಿಕೊಳ್ಳುತ್ತ ಪ್ರಶ್ನ್ಸಿಕೊಳ್ಳುತ್ತ
ಉತ್ತರ ಹುಡುಕಲು ಹೆಣಗುತ್ತವೆ. ಅವುಗಳ ಹೆಣಗಾಟದಲ್ಲಿ ಒದುಗನೂ ಭಾಗಿಯಗುತ್ತಾನೆ . ಹೊಸ ಅರ್ಥಗಳತ್ತ ಮುಖಮಾಡುತ್ತಾನೆ. ೧೯೪೯ ರ ಈ ಕೃತಿಯ ವಿಷಯ ಇಂದಿಗೂ ಪ್ರಸ್ತುತ ಅನಿಸುತ್ತದೆ. ಸುಮಾರು ೮೨-೮೩ ರಲ್ಲಿ ಓದಿದ್ದೆ ಈ
ಪುಸ್ತಕ ಮತ್ತೆ ಓದಿದೆ ಹೊಸ ಅರ್ಥ ಹುಡುಕಲು.