ಮಂಗಳವಾರ, ಫೆಬ್ರವರಿ 2, 2010

ವೈದೇಹಿ ಅವರ ಎರಡು ಕತೆಗಳು...

ಬಹುಷಃ ವೈದೇಹಿ ಅವರ ಜನಪ್ರಿಯತೆಗೆ ಲಂಕೇಶ್ ನೀಡಿದ ಕೊಡುಗೆ ಅಪ್ರತಿಮ ಸ್ವತಃ ವೈದೇಹಿ ಅವರು ಇದನ್ನು ಅನೇಕ ಸಂಧರ್ಭಗಳಲ್ಲಿಒಪ್ಪಿಕೊಳ್ತಾರೆ ಕೂಡ.ಬಹಳ ವಿಶಿಷ್ಟ ಶೈಲಿ ವೈದೇಹಿ ಅವರದು ಅವರು ಬೆಳೆದು ಬಂದ ಪರಿಸರ ತಾವು ನೋಡಿದ ತಿಳಿದ ಜೀವಂತ ಪಾತ್ರಗಳು ಅವುಗಳ ಹೆಣಗಾಟಗಳು ಹೀಗೆ ಮಣ್ಣಿನ ವಾಸನೆ ಇವರ ಅನೇಕ
ರಚನೆಗಳಲ್ಲಿ ಹೊಮ್ಮುತ್ತೆ. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಅವರ ಕತೆಗಳ ಬಗ್ಗೆ ಚರ್ಚಿಸಹೊರಟಿರುವ
ನನ್ನ ಸಾಹಸಕ್ಕೆ ನಿಮ್ಮ ಮನ್ನಣೆಯಿರಲಿ.ಪ್ರಸ್ತುತ ಕತೆಗಳನ್ನು ನಾನುಆಯ್ದುಕೊಂಡಿದ್ದು ಅಕ್ಷರ ಪ್ರಕಾಶನದ "ಕೆ ವಿ ಸುಬ್ಬಣ್ಣ ನೆನಪಿನ
ಮೊದಲ ಓದು ಪುಸ್ತಕ ಮಾಲೆ" ಯಿಂದ. ಇದು ಅಪರೂಪದ ಮಾಲೆ ಇಲ್ಲಿ ಪಂಪನಿಂದ ಡಿ ಆರ್ ನಾಗರಾಜ್ ವರೆಗೆ ಸುಬ್ಬಣ್ಣ ಆಯ್ದ
ಕತೆ, ಕವಿತೆ ಹಾಗೂ ವಿಮರ್ಶೆಗಳಿವೆ. ಪ್ರಸ್ತುತ ವೈದೇಹಿ ಸಂಕಲನದಲ್ಲಿ ಏಳು ಕತೆಗಳಿವೆ ಚಿತ್ರವಾಗಿ ಪ್ರಶಸ್ತಿ ಗಳಿಸಿದ "ಗುಲಾಬಿ ಟಾಕೀಸು.." ಸಹ ಇದೆ.ಇರಲಿ ಇದರಲ್ಲಿನ ನನಗೆ ಕಾಡಿದ ಎರಡು ಕತೆಗಳ ಬಗ್ಗೆ ಹೇಳುವೆ..

೧) ಪುಟ್ಟಮ್ಮತ್ತೆ ಹಾಗೂ ಮೊಮ್ಮಗಳು...>
---------------------------
ತಲೆಬರಹ ನೋಡಿದ್ರೆ ಇದು ಜನರೇಶನ್ ಗ್ಯಾಪ್ ಕತೆಅಂತ ಯಾರಾದರೂ ಸುಲಭದಲ್ಲಿ ಊಹಿಸಬಹುದು ಒಂದರ್ಥದಲ್ಲಿ ಅದು ನಿಜ ಕೂಡ. ಎರಡು ತಲೆಮಾರುಗಳ ಕತೆ ಇದು ಕೇಂದ್ರಬಿಂದು ಇಬ್ಬರು ಹೆಂಗಸರು.ಸಂಕ್ಷಿಪ್ತವಾಗಿ ಕತೆ ಬಗ್ಗೆ ಹೇಳುವೆ. ಪುಟ್ಟಮ್ಮತ್ತೆ ಬಹಳ ನೋವು ಅನುಭವಿಸಿದವಳು ಅವಳು ಕಂಡ ಗಂಡಸರು ಅವಳ ಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದಾರೆ
ಅದು ಅವಳ ಅಮ್ಮನನ್ನು ಅನಮತ್ತಾಗಿ ಬಾವಿಗೆ ತಳ್ಳಿದ ಅಪ್ಪ ಅಥವಾ ಸಾಕಿದ ನೆರೆಮನೆಯ ಅಜ್ಜಿಯ ವೈಕುಂಠದಂದು ಪುಟ್ಟಮ್ಮತ್ತೆ ಮಲಗಿದ ಹೊದಿಕೆಯೊಳಗೆತೂರಿ ಅವಳಿಂದ ಪಿನ್ನಿನಿಂದ ಚುಚ್ಚಿಸಿಕೊಂಡು ಓಡಿದವ ಅಥವಾ ಗಂಡನಾಗಿ ಬಂದ
ದೋಸೆ ಹುಯ್ಯೋ ವಾಸುಭಟ್ಟ ಆಗಿರಬಹುದು ತಮ್ಮ ಪಾತ್ರ ಆಡಿದ್ದಾರೆ. ವಾಸುಭಟ್ಟ ಸತ್ತ ಸುದ್ದಿ ಅದೇ ಹುಟ್ಟಿದ ಮಗಳನ್ನು ಎತ್ತಿಕೂತ ಪುಟ್ಟಮ್ಮತ್ತೆಗೆ ಬರುತ್ತದೆ.ನೆರೆಮನೆ ರಂಗಪ್ಪಯ್ಯ ಆಸರೆಯಾಗುತ್ತಾನೆ ಅವನೇ ಮಗಳಿಗೆ ಮದ್ವೆ ಮಾಡಿಸುತ್ತಾನೆ ಮಗಳನ್ನು ಹೆತ್ತ ಮಗಳು ಹೆಣವಾಗಿ ಮಲಗಿದಾಗ ಹೌಹಾರುತ್ತಾಳೆ.ಮೊಮ್ಮಗಳು ಕಮಲಾವತಿ ಅಜ್ಜಿಯ ಸ್ವಭಾವಕ್ಕೆ ತದ್ವಿರುದ್ಧ
ತನ್ನ ಸುತ್ತ ನಡೆಯುವ ಅನ್ಯಾಯಗಳಿಗೆ ಪ್ರತಿಭಟಿಸುವವಳು.ತನ್ನ ಅಜ್ಜಿಯ ಉಪದೇಶಕ್ಕೆ ಅಸಡ್ಡೆ ತೋರುವವಳು ಪಂಕ್ತಿಯಲ್ಲಿ
ಬಡಿಸುವಾಗ ಯಾರೋ ಕಣ್ಣುಹೊಡೆದಾಗ ಅವನ ತಲೆಮೇಲೆ ಬಿಸಿ ಸಾರು ಹುಯ್ದ ದಿಟ್ಟೆ..ತನ್ನ ಅಜ್ಜಿ ಕರ್ಮ ಎಂದು ಬೇರೆಯವರ
ಮನೆ ಚಾಕರಿಮಾಡೋದು ಅವಳಿಗೆ ಸರಿಬರಲಿಲ್ಲ. ಇವಳನ್ನೂ ಯಾರೋ ಕೆಲಸಕ್ಕೆ ಕರೆದಾಗ " ಯಂತ ಅಜ್ಜಿ ನೀ ಹೇಳುದು!
ನಾ ಹುಟ್ಟಿದ್ದ್ ಆ ಪರಮೇಸನ ಹೆಂಡ್ತಿ ಕಚ್ಚೆ ತಿಕ್ಕುಕಾ..." ಅಂತ ಪ್ರತಿಭಟಿಸಿದವಳು.ನೋಡಲು ಬಂದ ಒಂದೆರಡು ಸಂಭಂಧಗಳು
ಊರಲ್ಲಿ ಹುಟ್ಟಿದ ಇವಳ ಬಗೆಗಿನ ಪುಕಾರುಗಳಿಗೆ ಹೆದರಿ ಹಿಂತೆಗೆದಾಗ ರೆಡಿಮೇಡ್ ಅಂಗಿ ಹೊಲಿಯೋ ಕಾರಖಾನೆಗೆ ಕೆಲಸಕ್ಕೆ
ಸೇರಿಕೊಳ್ಳುತ್ತಾಳೆ.ನಾಲ್ಕು ಐದು ವರ್ಷ ಕಳೆದರೂ ಜೀವನದ ಗತಿಯಲ್ಲಿ ಯಾವ ಬದಲಾವಣೆಯೂ ಇಲ್ಲ.

ವೈದೇಹಿ ಎರಡು ತಲೆಮಾರಿನ ಚಿತ್ರಣ ನೀಡತಾರೆ.ಹೆಣ್ಣು ಅವಳ ಬವಣೆ ಬಗ್ಗೆ ಇಲ್ಲಿ ಗೋಳಾಟವಿಲ್ಲ ಹಾರಾಟ
ಚೀರಾಟಗಳಿಲ್ಲ. ಬದಲು ಪುಟ್ಟಮ್ಮತ್ತೆಯ ಬದುಕು ಬಿಚ್ಚಿಡುತ್ತಲೇ ಅನೇಕ ಪ್ರಶ್ನೆ ಕೇಳ್ತಾರೆ.ಬಂದಿದ್ದೆಲ್ಲ ಬರಲಿ ಎಂದು ಗಟ್ಟಿಯಾದ
ಪುಟ್ಟಮ್ಮತ್ತೆಯ ತದ್ವಿರುದ್ಧವಾದ ಮೊಮ್ಮಗಳು.ಅನ್ಯಾಯವನ್ನು ಹೊಸಕಿ ಹಾಕುವವಳು ನೂರೆಂಟು ಪ್ರಶ್ನೆಗಳು ಅವಳಿಗೆ ಅವುಗಳಿಗೆ
ತನ್ನದೇ ರೀತಿಯಲ್ಲಿ ಸಮಧಾನ ಕಂಡುಕೊಂಡವಳು.ಇಲ್ಲಿ ಈ ನಿಲುವು ಸರಿ ಎಂದು ಲೇಖಕಿ ಪ್ರತಿಪಾದಿಸುತ್ತಿಲ್ಲ ಬದಲು ಒಂದು
ತಲೆಮಾರು ಬದಲಾದರೂ ಹೆಣ್ಣು ಪಡುವ ಬವಣೆಗೆ ಅಂತ್ಯಇಲ್ಲ ಎಂದು ಹೇಳುತ್ತಾರೆ.

೨) ಅಮ್ಮಚ್ಚಿಯೆಂಬ ನೆನಪು...
----------------------
ಪ್ರಸ್ತುತ ಕತೆ ಕಥಾನಾಯಕಿ ಹಾಗೂ ಅವಳ ಬಾಲ್ಯದ ಒಡನಾಡಿ ಅಮ್ಮಚ್ಚಿಯ ಜೊತೆ ಕಳೆದ ದಿನಗಳ ಕುರಿತದ್ದು .ಅಮ್ಮಚ್ಚಿ
ಹಾಗೂ ಓರಿಗೆಯವರಲ್ಲ ಆದರೆ ನಾಯಕಿಯ ನೆನಪಲ್ಲಿ ಅಮ್ಮಚ್ಚಿ ತುಂಬಿಕೊಂಡಿದ್ದಾಳೆ. ಅಮ್ಮಚ್ಚಿಗೆ ಅಪ್ಪ ನಿಲ್ಲ ಸೀತತ್ತೆ ಅವಳ
ತಾಯಿ ಗಂಡು ದಿಕ್ಕಿಲ್ಲದೆ ಮನೆಗೆ ವೆಂಕಪ್ಪ ಬರುತ್ತಾನೆ ನೋಡುತ್ತಿದ್ದಂತೆ ವೆಂಕಪ್ಪಯ್ಯ ಅನಿಸಿಕೊಳ್ಳುತ್ತಾನೆ. ಸೀತತ್ತೆಗೆ ಅವನ
ಉಪಸ್ಥಿತಿ ಸಂತಸ ತಂದಿರುತ್ತದೆ ಆಸರೆಗಾಗಿ ಬಂದವ ಎಂದು ನಂಬಿರುತ್ತಾಳೆ ಆದರೆ ಅಮ್ಮಚ್ಚಿಯದು ಮಾತ್ರ ತದ್ವಿರುದ್ಧ ನಿಲುವು
ಉಪಟಳ ಕೊಡಲೇ ಬಂದವ ಇದು ಅವಳ ನಿಲುವು. ಒಂಥರಾ ಎಣ್ಣೆ ಸೀಗೆ ಸಂಭಂಧ ಇಬ್ಬರದೂ. ಅಮ್ಮಚ್ಚಿಗೆ ತನ್ನ ವಿಷಯಗಳಲ್ಲಿ
ಮೂಗು ತೂರಿಸುವುದು ಸರಿ ಬರೋದಿಲ್ಲ. ಇವಳು ವಾರೆ ಬೈತಲೆ ತೆಗೆದರೆ, ಪೇಟೆಗೆ ತಿರುಗಾಡಲು ಹೋದರೆ,,ಸಿನೇಮಾಗೆ ಹೋದರೆ ಹೀಗೆ ಇವಳ ಪ್ರತಿ ನಡೆಯಲ್ಲೂ ಅವನಿಗೆ ತಪ್ಪು ಕಾಣುತ್ತದೆ. ಆದರೆ ಹಾಗಂತ ಅಮ್ಮಚ್ಚಿ ಅವನಿಗೆ ಸೊಪ್ಪು ಹಾಕುವಳಲ್ಲ.
ಇವರಿಬ್ಬರ ನಡುವೆ ಸೀತತ್ತೆ ಒದ್ದಾಡುತ್ತಿರುತ್ತಾಳೆ ನಾಯಕಿ ಮೂಕ ಪ್ರೇಕ್ಷಕಿ. ರಮ ಟೀಚರ್ ಕಡೆ ರವಿಕೆ ಹೊಲಿಸಲು ಹೋದಾಗ
ಅವರ ಕಡೆ ಮೂದಲಿಕೆಯ ಮಾತು ಅಮ್ಮಚ್ಚಿ ಕೇಳಬೇಕಾಗುತ್ತದೆ ಮಾತ್ರವಲ್ಲ ರಮಾ ಟೀಚರ್ ಇವಳು ಹೇಳಿದ ಪ್ರಕಾರ ಹೊಲಿಯದೆ ವೆಂಕಪ್ಪಯ್ಯ ಹೇಳಿದ ರೀತಿಯಲ್ಲಿ ಹೊಲಿದಾಗ ಅಮ್ಮಚ್ಚಿ ಕೋಪಕ್ಕೆ ತಾರವೇ ಇಲ್ಲ. ಅದೇ ಸಿಟ್ಟಿನಲ್ಲಿ ವೆಂಕಪ್ಪಯ್ಯ
ತಿರುಪತಿಗೆ ಹೋದಾಗ ಅವನ ಅಂಗಿ ವಿರೂಪಗೊಳಿಸುತ್ತಾಳೆ ಊರಿಂದ ಬಂದ ವೆಂಕಪ್ಪಯ್ಯ ಅಮ್ಮಚ್ಚಿ ಮೇಲೆ ಏರಿ ಹೋಗುತ್ತಾನೆ
ದರದರ ಎಳೆದವ ರೂಮಿಗೆ ಒಯ್ಯುತ್ತಾನೆ ಸೀತತ್ತೆಯ ಕೂಗಾಟಕ್ಕೂ ಬೆಲೆ ಇಲ್ಲದೆ, ನಾಯಕಿಗೆ ನೋಡಿದ ಸಂಗತಿ ಯಾರಿಗೂ
ಹೇಳಬಾರದೆಂದು ತಾಕೀತು ಮಾಡಲಾಗುತ್ತದೆ. ಮುಂದೆ ವೆಂಕಪ್ಪಯ್ಯ ಅಮ್ಮಚ್ಚಿಯನ್ನು ಮದುವೆಯಾಗುತ್ತಾನೆ. ಮುಂದೆ ಎಂದೋ ಒಂದಿನ ನಾಯಕಿಗೆ ಮತ್ತೆ ಅಮ್ಮಚ್ಚಿಯ ದರ್ಶನ ವಾಗುತ್ತದೆ. ಸೀತತ್ತೆ ಕೇಳಿದಾಗ ವೆಂಕಪ್ಪಯ್ಯ ನೇಣ್ ಹಾಕ್ಕೊಂಡು ಸತ್ತ ಸುದ್ದಿ ನಿರ್ವಿಕಾರವಾಗಿ ಹೇಳುತ್ತಾಳೆ.

ವೈದೇಹಿ ಅವರ ಮೇಲಿನ ಕತೆ ಓದುತ್ತಿದ್ದಂತೆ ನನಗೆ ನೆನಪಾದದ್ದು ಆಲನಹಳ್ಳಿ ಅವರ ಕಾಡು ಕಾದಂಬರಿ ಅಲ್ಲಿಯ ಕಿಟ್ಟಿ ಹಾಗೂ ಇಲ್ಲಿಯ ನಾಯಕಿ ಇಬ್ಬರೂ ತಮ್ಮ ಬಾಲ್ಯದಲ್ಲಿ ಎದುರಾದ ವ್ಯಕ್ತಿಗಳ ಬಗ್ಗೆ ಹೇಳುತ್ತಲೇ ಅವರು ಅನುಭವಿಸಿದ
ಕ್ರೌರ್ಯ , ಕ್ಷುದ್ರತೆ ಎಲ್ಲ ಅನಾವರಣಗೊಳಿಸುತ್ತಾರೆ.ಇದು ಬರೀ ವರದಿ ಮೀರಿ ನಿಲ್ಲುವಂತದ್ದು. ಮೇಲಿನ ಎರಡೂ ಕತೆಗಳಲ್ಲಿ ಬಳಸಿದ ಭಾಷೆ ವಿಶಿಷ್ಟವಾಗಿದೆ. ಘಟ್ಟದ ಕೆಳಗಿನ ಭಾಷೆ ಕನ್ನಡದ ಮಟ್ಟಿಗೆ ಅಪರೂಪ. ಕತೆಗಾರ ತಾ ನಿರ್ಮಿಸಿದ ಪಾತ್ರಗಳಲ್ಲಿ
ಜೀವ ತುಂಬಬೇಕಾದರೆ ಅವರಾಡುವ ಭಾಷೆಯೂ ವಿಶಿಷ್ಟವಾಗಿಸಬೇಕು. ವೈದೇಹಿ ಆ ನಿಟ್ಟಿನಲ್ಲಿ ಗೆದ್ದಿದ್ದಾರೆ. ಇನ್ನೂ ಹಲವು ಗಮನ
ಸೆಳೆಯೂ ಕತೆಗಳು ಈ ಸಂಕಲನದಲ್ಲಿವೆ....