ಸೋಮವಾರ, ಜೂನ್ 8, 2009

ಕೊಡುವುದೇನು ಕೊಂಬುದೇನು---ಸುನಂದಾ ಬೆಳಗಾಂವಕರ್

ಸುನಂದಾ ಬೆಳಗಾವಕರ ಕನ್ನಡ ಮಹಿಳಾ ಲೇಖಕರಲ್ಲಿ ಎದ್ದು ಕಾಣುವ ಹೆಸರು. ತೀರ ಇತ್ತೀಚೆಗೆ ಬರೆಯಲು ಪ್ರಾರಂಭಿಸಿದ
ಇವರು ಝಾಂಬಿಯಾ ದೇಶದಲ್ಲಿದ್ದಾಗ ರಾಮಚಂದ್ರ ಶರ್ಮರ ಒತ್ತಾಸೆಗೆ ಕಟ್ಟುಬಿದ್ದು ತಾವು ಬರೆದ ಪ್ರಬಂಧ ಸುಧಾಕ್ಕೆ ಕಳಿಸಿದರಂತೆ ಎಂಬಿಸಿಂಗ್ ಸಂಪಾದಕರಾಗಿದ್ದರು ನಮ್ಮಕನ್ನಡದ ಪುಣ್ಯ ಅವರ ಕೈ ತುತ್ತು ಓದುಗರ ಮನೆ ಮಾತಾಯಿತು. ನಾ ಹೇಳ
ಹೊರಟಿರುವುದು ಅವರ "ಕೊಡುವುದೇನು ಕೊಂಬುದೇನು" ಪುಸ್ತಕದ ಬಗ್ಗೆ.

"ಕೊಡುವುದೇನು ? ಕೊಂಬುದೇನು? ಒಲವು,ಸ್ನೇಹ,ಪ್ರೇಮ ಹೊರಗೆ ಬರಿದು ,ಒಳಗೆ ನಲಿದು ಇದ್ದವರಿಗೆ ನೇಮ" ಬೇಂದ್ರೆ ಅವರ ಈ
ಕವನದ ಸಾಲು ಈ ಪುಸ್ತಕದಲ್ಲಿ ಅಂತರಗಂಗೆ ಯಾಗಿ ಪ್ರವಹಿಸುತ್ತದೆ.. ಪ್ರಸ್ತುತ ಪುಸ್ತಕವನ್ನು ವ್ಯಕ್ತಿ ಚಿತ್ರಣ ಅನ್ನಬೇಕೋ ಅಥವಾ
ಪ್ರಬಂಧ ಎನ್ನಬೇಕೋ ಎಂಬ ಗೊಂದಲ ಬಹುಷಃ ಲೇಖಕಿಯನ್ನು ಕಾಡಿರಬೇಕು.. ಅದೇನೆ ಇರಲಿ ಸುನಂದಾ ಅವರು ಈ ಸಂಕಲನದಲ್ಲಿ ತಾವು ಕಂಡ ತಾವು ಕೇಳಿತಿಳಿದ ವ್ಯಕ್ತಿಗಳ ಬಗ್ಗೆ ಬರೆಯುತ್ತಾರೆ...ಆ ಪಾತ್ರಗಳ ಸುಖ ದುಃಖ ,ನೋವು ನಲಿವು ,ಪ್ರೀತಿ ಅಂತಃಕರಣ ನಮ್ಮನ್ನು ತೀವ್ರವಾಗಿ ತಟ್ಟುತ್ತವೆ. ಮಾನವತೆ ಅಳಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ಲೇಖಕಿ ಸೃಷ್ಟಿಸಿದ ಪಾತ್ರಗಳು ಸಂಜೀವಿನಿ ಯಾಗಿ ತೋರುತ್ತವೆ.

ಪಾತ್ರಗಳು ಎಂತೆಂತವು.. ಬೆಬ್ರಾ --ಬೆಲ್ಲ ಬೇಡುವ ಬ್ರಾಹ್ಮಣ ನ ಕತೆ ಎದೆ ಕಲಕದೆ ಬಿಡಲಾರದು...ಆ ಯಲಗೂರಿನ ಕಡಖ್ ಹಣಮಪ್ಪ, ಬಸಿರ ಬಯಕೆ ತಡೆಯದೆ ಬಾಯಿಗೆ ಹೂರಣ ಹಾಕಿಕೊಂಡವಳನ್ನು ಕ್ಷಮಿಸಲಾರದೇ ಹೋದ ಬೆಬ್ರಾ ನ ನಶೀಬಿಗೆ ಕಾರಣವಾದ.

ಮಳೆಗಾಲದಲ್ಲಿ ಎಲ್ಲೆಲ್ಲಿಯೂ ಧಂಡಿಯಾಗಿ ಬೆಳೆಯುವ ಹೊನಗನ್ನಿ ಅದರ ಜತೆ ತಳಕು ಹಾಕಿಕೊಂಡ ಒಂದು ಪಾತ್ರ ಆ ಪಾತ್ರದ
ದುರಂತ ..ಬಹುಷಃ ಮಾಸ್ತಿ ನಂತರ ಇಷ್ಟು ನವಿರಾದ ಪಾತ್ರ ಚಿತ್ರಣ ಯಾರೂ ಮಾಡಿರಲಿಕ್ಕಿಲ್ಲ.

ಝಾಕಣಿಲೆ ಬಡಸಬೇಕು ಬುರುಬುರಿ ಗೋವಿಂದಾಚಾರ್ ರಿಗೆ ತಿನ್ನಾಸ ಬಡಕ ಇರಬಹುದು ಆದರೆ ಆ ಪಾತ್ರದ ಹಿಂದೆಯೂ ಕಳಕಳಿ
ಇದೆ ನೋವಿದೆ ಒಂದು ಸುಂದರ ಕತೆಯಿದೆ.

ಇಡೀ ಪುಸ್ತಕದಲ್ಲಿ ಅಂತಃಕರಣ ಕಲಕುವ ಎರಡು ಪಾತ್ರಗಳು ’ರಾಜಕ್ಕ--ಕಮಲಕ್ಕ,’ ನಮ್ಮ ಹಿರಿಯರು ಅನೇಕ ತಪ್ಪು ಮಾಡಿದ್ದರು ಅದಕ್ಕೆ ನಿದರ್ಶನ ವಿಧವಾ ಹೆಂಗಸರ ಗೋಳು. ಮೇಲಿನ ಎರಡೂ ಪಾತ್ರ ಆ ದುರ್ವಿಧಿಗೆ ಬಲಿಯಾದವರು. ತಮ್ಮನ ಬಾಳು ಹಸನಾಗಲೆಂದು ಜೀವ ತೇದವರು.... ತಮ್ಮನ ಮಕ್ಕಳಿಬ್ಬರನ್ನೂ ಅವರು ಬೆಳೆಸಿದ ಪರಿಯಾದರೂ ಎಂತಹುದು..."ನಮ್ಮಕ್ಕ ಬಂಗಾರ
ವಸ್ತಾತಣ್ಣಗ ಹತ್ತಾವ ಅಂತ ಅಳತಿದ್ಲಂತ. ಹಬ್ಬದ ದಿನ ಅಕಿಗೆ ವಸ್ತ ಇಡಿಸೂದಂದ್ರ ಅವರಿಬ್ಬರಿಗೂ ಬಹಳ ತ್ರಾಸು. ಇಬ್ಬರು ಗಂಡುಹುಡುಗರು ಸತ್ತ ಮ್ಯಾಲ ಹುಟ್ಟಿದ ಮಗಳು ಅಕಿನ್ನ ಅಳಿಸೋ ಹಂಗಿಲ್ಲ. ಅವಳಿಗೆ ಉಡಿಸಿ ತೊಡಿಸಿ ನೋಡೋ ಆಶಾ ಅವರಿಗೆ
ಪಾಪ ನಮ್ಮ ಅತ್ಯಾರಿಬ್ರು ಅಕಿನ್ನ ರಮಿಸಿ ,ವಸ್ತಾ ಸೆರಗ ಮುಚ್ಚಿ ತಮ್ಮ ಹೊಟ್ಟಿಮ್ಯಾಲ ಇಟಗೊಂಡ ಬಿಸಿ ಮಾಡಿ ಇಡಸತಿದ್ರಂತ"
ಇಂತಹ ಕಳಕಳಿ ಬೇರೆಯವರ ಮ್ಯಾಲ ಆದ್ರ ಸ್ವಂತಕ್ಕೆ ಏನು ಕಂಡು ಕೇಳರಿಯದ ವ್ರತ."ಮನೆ ಆಕಳುಗಳನ್ನು ಒಂದು ತಿಂಗಳು ಅಡವಿಗೆ ಮೇಯಲು ಬಿಡುವಂತಿಲ್ಲ ಕೊಟ್ಟಿಗೆಯಲ್ಲಿಯೇ ಇಡುವುದು ,ದಿನ ನಿತ್ಯ ಕೊಟ್ಟಿಗೆ ಸ್ವಚ್ಛ ಮಾಡಿ ಮೈ ತೊಳೆಯುವುದು ಹುಲ್ಲು ಮೇವುಗಳೊಂದಿಗೆ ಅವುಗಳಿಗೆ ಜೋಳ ತಿನಿಸುವುದು . ಅವುಗಳ ಸೆಗಣಿಯಲ್ಲಿ ಬೀಳುವ ಜೋಳ ಆರಿಸಿ ,ತೊಳೆದು ಒಣಗಿಸಿ ಆ ಕಾಳುಗಳ ಹಿಟ್ಟಿನಿಂದ ಮಾಡಿದ ಗಂಜಿಯನ್ನು ಕುಡಿಯುವುದು..." ಯಾಕಾಗಿ ಇಂತಹ ವೃತ ..."ಮುಂದಿನ ಜನ್ಮದಾಗ ನಮಗ ಈ ವಿಧವತ್ವ
ಬೇಡ ಅದಕ್ಕ ಪರಮಾತ್ಮಗ ನಮ್ಮ ಪ್ರಾರ್ಠನಾ"
ಮೇಲಿನ ವಾಕ್ಯಓದಿ ಎಂತಹ ಕಲ್ಲೆದೆಯೂ ಕರಗುತ್ತದೆ. ಇಂತಹ ವ್ಯಕ್ತಿಗಳೂ ಇಲ್ಲಿದ್ದರೇ ಎನ್ನುವ ಪ್ರಶ್ನೆ ಕಾಡುತ್ತದೆ.
ಸುನಂದಾ ಅವರ ಲೇಖನಗಳಲ್ಲಿ ಎಲ್ಲೂ ಆಕ್ರೋಶವಿಲ್ಲ ,ಘೋಷಣೆ ಗಳಿಲ್ಲ ಆದರೆ ಅಂತರಗಂಗೆ ಯಾಗಿ ಹರಿಯುವ ಕಳಕಳಿ ನನ್ನ
ಎದೆ ಕರಗಿಸಿದೆ... ಈ ಲೇಖ ಬರೆಸಿದೆ.....

6 ಕಾಮೆಂಟ್‌ಗಳು:

  1. ಸುನಂದಾ ಬೆಳಗಾಂವಕರ ಅವರ ‘ಪಂಚಕಜ್ಜಾಯ’ವಂತೂ ‘ಸುಧಾ’ದ ಓದುಗರೆಲ್ಲರಿಗೂ ಪಂಚಕಜ್ಜಾಯವನ್ನೇ ಉಣಿಸಿತು. ಸುನಂದಾ ಅವರ ಆಡುನುಡಿಯ ಬಳಕೆ ಆಪ್ಯಾಯಮಾನವಾದದ್ದು.

    ಪ್ರತ್ಯುತ್ತರಅಳಿಸಿ
  2. adeno kelavondu anishta paddhati nammalle belakondu bandava...eega yeshto sudhaaraseda.. aadroo innoo yeshto agabekageda. andhanga neevu baradaddu nodi, aa lekhana odateeni ee sala india hodaga.

    Rashmi

    ಪ್ರತ್ಯುತ್ತರಅಳಿಸಿ
  3. ಸುನಾಥ ಅವರಿಗೆ ಬೆಳಗಾವಕರಅವರ ಬಗ್ಗೆ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನಾ ಹೋಗಿದ್ದೆ ಧಾರವಾಡದ ಮಣ್ಣು ಅದರ ಮೃದ್ಗಂಧ ಹೊತ್ತುಕೊಂಡು ತಿರುಗುವುದಾಗಿ ಹೇಳುತ್ತಿದ್ದರು,

    ರಶ್ಮಿ ಮೊದಲ ಬಾರಿ ಬ್ಲಾಗಿಗೆ ಬಂದೀರಿ ಸುಸ್ವಾಗತ ನಿಮ್ಮ ಅನಿಸಿಕೆಗಳಿಗೆ ನನ್ನ ಸಹಮತಿ ಇದೆ ಆಗಾಗ ಬರುತ್ತಿರಿ ಪ್ರೋತ್ಸಾಹ
    ಕೊಡುತ್ತಿರಿ...

    ಪ್ರತ್ಯುತ್ತರಅಳಿಸಿ
  4. ವಿಶಿಷ್ಟವೂ ಮೌಲಿಕವೂ ಆಗಿರುವ ಬ್ಲಾಗ್ ಇದು.
    ಹೆಚ್ಚೆಚ್ಚು ಗಹನವಾಗುತ್ತ ಸಾಗುವ ಲಕ್ಷಣಗಳಿವೆ.
    ಸಾಗಲಿ.

    ಪ್ರತ್ಯುತ್ತರಅಳಿಸಿ
  5. ಶಾಸ್ತ್ರಿ ಸರ್ ಧನ್ಯವಾದಗಳು ನಿಮ್ಮಂಥ ಹಿರಿಯರ ಪ್ರೋತ್ಸಾಹ ಅಗತ್ಯ....

    ಪ್ರತ್ಯುತ್ತರಅಳಿಸಿ
  6. ನಾನು ಸದ್ಯ ಅವರ ಪುಸ್ತಕಗಳನ್ನು ಓದುತ್ತಿದ್ದೇನೆ.
    -ಧರಿತ್ರಿ

    ಪ್ರತ್ಯುತ್ತರಅಳಿಸಿ